ಬೆಂಗಳೂರು: ಜೆಡಿಎಸ್ ಪಕ್ಷದ ಅಭ್ಯರ್ಥಿಗಳಿಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಬಿಗ್ ಶಾಕ್ ನೀಡಿದ್ದಾರೆ. ಪಕ್ಷದ ಮೊದಲ ಪಟ್ಟಿಯೇ ಅಂತಿಮವಲ್ಲ ಬದಲಾವಣೆಯಾಗಲಿದೆ ಎಂದು ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ದೇವೇಗೌಡರು, ಪ್ರತಿದಿನ ಪಟ್ಟಿಯಲ್ಲಿ ಬದಲಾವಣೆಯಾಗುತ್ತದೆ. ನಿತ್ಯವೂ ಸರ್ವೆಗಳು ನಡೆಯುತ್ತವೆ ಎಂದಿದ್ದಾರೆ.
ಇನ್ನು ಶಿವಲಿಂಗೇಗೌಡ ಪಕ್ಷ ತೊರೆಯಲಿದ್ದಾರೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ, ಕುಮಾರಸ್ವಾಮಿ ಜೊತೆ ಶಿವಲಿಂಗೇಗೌಡ ಮಾತನಾಡಿದ್ದಾರೆ. ದ್ವಂದ್ವದಲ್ಲಿದ್ದಾರೆ ಇನ್ನೂ ಸಮಸ್ಯೆ ಬಗೆಹರಿದಿಲ್ಲ. ಹಾಸನದಲ್ಲಿ ಜೆಡಿಎಸ್ ಆಕಾಂಕ್ಷಿಗಳು ಬಹಳ ಜನರಿದ್ದಾರೆ. ಹೆಚ್.ಡಿ.ಕೆ, ರೇವಣ್ಣ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಮಾಡುತ್ತಾರೆ. ಯಾರು ಸಿಎಂ ಆಗಬೇಕು ಎಂಬುದನ್ನೂ ಜನರೇ ನಿರ್ಧರಿಸುತ್ತಾರೆ ಎಂದರು.
ಜನವರಿಯಿಂದ ನಾನು ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುತ್ತೇನೆ. ಕುಮಾರಸ್ವಾಮಿ ಸೇರಿ ಎಲ್ಲರೂ ಪಂಚರತ್ನ ಯಾತ್ರೆ ಮಾಡುತ್ತಿದ್ದಾರೆ. ಪ್ರತಿ ಹಳ್ಳಿಯಲ್ಲಿಯೂ ಎಲ್ಲರಿಗೂ ಒಂದೊಂದು ಜವಾಬ್ದಾರಿ ನೀಡಲಾಗಿದೆ. ಪಕ್ಷದ ಮುಖಂಡರು, ಶಾಸಕರು, ಮಾಜಿ ಶಾಸಕರು ಪದಾಧಿಕಾರಿಗಳು ಎಲ್ಲರೂ ಮನೆ ಮನೆಗೆ ತೆರಳಿ ಪಕ್ಷದ ಪರ ಕೆಲಸ ಮಾಡಲು ಸೂಚಿಸಲಾಗಿದೆ. ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ತಿಳಿಸಿದರು.