‘ದಿ ಕಾಶ್ಮೀರ್ ಫೈಲ್ಸ್’ ಕುರಿತ ತಮ್ಮ ಅಭಿಪ್ರಾಯಕ್ಕೆ ಸ್ವತಃ ಇಸ್ರೇಲ್ ರಾಯಭಾರಿಯಿಂದಲೇ ವಿರೋಧ ವ್ಯಕ್ತವಾಗಿದ್ದರೂ ಸಹ ಅದನ್ನು ಲೆಕ್ಕಿಸದ ಇಸ್ರೇಲ್ ಚಲನಚಿತ್ರ ನಿರ್ದೇಶಕ ನಾಡವ್ ಲಪಿಡ್, ತಮ್ಮ ಮಾತುಗಳನ್ನು ಮತ್ತೆ ಪುನರುಚ್ಚರಿಸಿದ್ದಾರೆ. ದಿ ಕಾಶ್ಮೀರ್ ಫೈಲ್ಸ್ ತಿರುಚಿದ ಹಿಂಸಾತ್ಮಕ ಚಿತ್ರ ಎಂದು ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ಅವರು ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ.
ರಾಜಕೀಯ ಕಾರಣಗಳಿಗಾಗಿ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಈ ಚಿತ್ರವನ್ನು ಚಲನ ಚಿತ್ರೋತ್ಸವದ ಸ್ಪರ್ಧಾ ವಿಭಾಗಕ್ಕೆ ಕಳುಹಿಸಿಕೊಡಲಾಗಿತ್ತು. ಈ ಚಿತ್ರದಲ್ಲಿ ಸೂಕ್ಷ್ಮ ವಿಚಾರವೇ ಇಲ್ಲ. ಚಿತ್ರ ನೋಡಿದ ಯಾರಿಗಾದರೂ ಸಹ ಇದು ತಿರುಚಿದ ವಿಷಯಗಳಿಂದ ಕೂಡಿದೆ ಎಂಬುದರ ಅರಿವಾಗುತ್ತದೆ ಎಂದು ಲಪಿಡ್ ತಿಳಿಸಿದ್ದಾರೆ.
ಚಲನ ಚಿತ್ರೋತ್ಸವಕ್ಕೆ ತೀರ್ಪುಗಾರನಾಗಿ ಬಂದಿರುವ ನಾನು ಚಿತ್ರದ ವಿಮರ್ಶೆ ಮಾಡದೆ ಗೋವಾದ ಬೀಚ್ ಹಾಗೂ ಊಟದ ಬಗ್ಗೆ ಮಾತನಾಡಬೇಕಿತ್ತೇ ಎಂದು ಪ್ರಶ್ನಿಸಿರುವ ಅವರು, ಸ್ಥಳೀಯರಿಗೆ ಈ ಚಿತ್ರದ ಕುರಿತು ಮಾತನಾಡುವುದು ಕಷ್ಟವಾಗುತ್ತದೆ. ಆದರೆ ವಿದೇಶಿಗನಾಗಿ ಸತ್ಯ ಹೇಳಬೇಕಾಗಿದ್ದು ನನ್ನ ಕರ್ತವ್ಯ ಎಂದು ಹೇಳಿದ್ದಾರೆ.