ಬೆಂಗಳೂರು: ಪೋಡಿ ಮುಕ್ತ ಅಭಿಯಾನವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕಂದಾಯ ಇಲಾಖೆ ಕ್ರಮ ಕೈಗೊಂಡಿದೆ.
ರಾಜ್ಯದಲ್ಲಿ ಬಹು ಮಾಲೀಕತ್ವದ ಖಾಸಗಿ, ಹಿಡುವಳಿ ಜಮೀನು ಅಳತೆ ಮಾಡಿ ಏಕ ಮಾಲೀಕತ್ವಕ್ಕೆ ಪರಿವರ್ತಿಸಲು ಮ್ಯುಟೇಷನ್ ಪೋಡಿ ಮಾಡುವ ಪೋಡಿ ಮುಕ್ತ ಅಭಿಯಾನ ಚುರುಕುಗೊಳಿಸಲಾಗಿದೆ. ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಆಯುಕ್ತರು, ಯೋಜನೆಯ ನಿರ್ವಹಣೆಯನ್ನು ತಂತ್ರಾಂಶದಲ್ಲಿ ಅಳವಡಿಸಿ ಆನ್ಲೈನ್ ನಲ್ಲಿ ನಿರ್ವಹಿಸಲು ಕ್ರಮ ವಹಿಸಿರುವ ಕುರಿತಾಗಿ ಸುತ್ತೋಲೆ ಹೊರಡಿಸಿದ್ದಾರೆ.
ಜಾರಿಯಲ್ಲಿರುವ ಎಲ್ಲಾ ತಾಲೂಕುಗಳಿಗೆ ಪೋಡಿ ಮುಕ್ತ ಯೋಜನೆ ಆನ್ಲೈನ್ ವ್ಯವಸ್ಥೆ ಅನ್ವಯವಾಗಲಿದೆ.ಎಲ್ಲಾ ಸಹಾಯಕ ನಿರ್ದೇಶಕರು ಲಾಗಿನ್ ನಲ್ಲಿ ಯೋಜನೆಯಡಿ ಗ್ರಾಮಗಳನ್ನು ಆಯ್ಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಯೋಜನೆಯಡಿ ಗ್ರಾಮದ ವ್ಯಾಪ್ತಿಯ ಬಹು ಮಾಲೀಕತ್ವದ ಸರ್ವೇ ನಂಬರ್ ಗಳ ಪ್ರತ್ಯೇಕ ಅರ್ಜಿ ರಚನೆಯಾಗಲಿದೆ. ಈ ಅರ್ಜಿಗಳು 11ಇ ವಿಷಯ ನಿರ್ವಾಹಕರ ಲಾಗಿನ್ ನಲ್ಲಿ ಆಕಾರಬಂದ್ ವಿಸ್ತೀರ್ಣದೊಂದಿಗೆ ಪರಿಶೀಲನೆಯಾಗಲಿದೆ.
ಪೋಡಿ ಮುಕ್ತ ಯೋಜನೆ ಅರ್ಜಿಗಳು ಭೂಮಾಪಕರಿಗೆ ಹಂಚಿಕೆಯಾದ ನಂತರ ಪ್ರಕ್ರಿಯೆ ಮೋಜಣಿಯಲ್ಲಿನ ತತ್ಕಾಲ್ ಪೋಡಿ ಪ್ರಕರಣದಂತೆ ನಡೆಸಲಾಗುವುದು. ಈ ಮೂಲಕ ಬಹುಮಾಲೀಕತ್ವದ ಖಾಸಗಿ ಹಿಡುವಳಿ ಜಮೀನು ಅಳತೆ ಮಾಡಿ ಏಕ ಮಾಲಿಕತ್ವಕ್ಕೆ ಪರಿವರ್ತಿಸಲು ಪೋಡಿ ಮುಕ್ತ ಅಭಿಯಾನ ಚುರುಕುಗೊಳಿಸಲು ಕಂದಾಯ ಇಲಾಖೆ ಕ್ರಮ ಕೈಗೊಂಡಿದೆ.