ಅಹಮದಾಬಾದ್: ವೈದ್ಯಕೀಯ, ತಾಂತ್ರಿಕ ಮತ್ತು ಕಾನೂನು ಶಿಕ್ಷಣವನ್ನು ಹಿಂದಿ ಅಥವಾ ಪ್ರಾದೇಶಿಕ ಭಾಷೆಯಲ್ಲಿ ನೀಡಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅಮಿತ್ ಶಾ, ಹಿಂದಿ ಅಥವಾ ಪ್ರಾದೇಶಿಕ ಭಾಷೆಯಲ್ಲಿ ತಾಂತ್ರಿಕ, ವೈದ್ಯಕೀಯ, ಕಾನೂನು ಶಿಕ್ಷಣ ನೀಡುವುದರಿಂದ ಇಂಗ್ಲಿಷ್ ಪರಿಣಿತರಲ್ಲದ ವಿದ್ಯಾರ್ಥಿಗಳ ಪ್ರತಿಭೆಯನ್ನು ದೇಶ ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಎಲ್ಲಾ ರಾಜ್ಯ ಸರ್ಕಾರಗಳು ವೈದ್ಯಕೀಯ, ತಾಂತ್ರಿಕ, ಕಾನೂನು ಸೇರಿದಂತೆ ಎಲ್ಲ ಶಿಕ್ಷಣವನ್ನು ಹಿಂದಿ ಅಥವಾ ಪ್ರಾದೇಶಿಕ ಭಾಷೆಗಳಲ್ಲಿ ಭಾಷಾಂತರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಮಾತೃಭಾಷೆಯ ಮೂಲಕ ಶಿಕ್ಷಣವನ್ನು ವೇಗ ಮತ್ತು ಸುಲಭವಾಗಿ ಪಡೆಯಬಹುದಾಗಿದ್ದು, ಈ ಮೂಲಕ ಉನ್ನತ ಶಿಕ್ಷಣದಲ್ಲಿ ಪ್ರತಿಭೆಗೆ ಉತ್ತೇಜಿಸಬಹುದಾಗಿದೆ. ದೇಶದಲ್ಲಿ ಶೇಕಡ 5ರಷ್ಟು ಪ್ರತಿಭೆ ಮಾತ್ರ ಬಳಕೆಯಾಗುತ್ತಿದ್ದು, ಮಾತೃಭಾಷೆಯಲ್ಲಿ ಶಿಕ್ಷಣ ನೀಡಿದಾಗ ಶೇಕಡ 100 ರಷ್ಟು ಪ್ರತಿ ಸದ್ಬಳಕೆ ಮಾಡಿಕೊಳ್ಳಬಹುದು ಎಂದು ತಿಳಿಸಿದ ಅವರು ತಾವು ಇಂಗ್ಲಿಷ್ ಭಾಷೆ ವಿರೋಧಿಯಲ್ಲ ಎಂದು ಹೇಳಿದ್ದಾರೆ.