ಉಸಿರಾಟ ನಿರಂತರ ಪ್ರಕ್ರಿಯೆ. ಬದುಕಿರುವ ಎಲ್ಲಾ ಜೀವಿಗಳೂ ಉಸಿರಾಡುತ್ತವೆ. ಆದರೆ, ಉಸಿರಾಟ ಸರಿಯಾಗಿಲ್ಲದೆ ಕೆಲವೊಮ್ಮೆ ಏರುಪೇರಾಗುತ್ತದೆ. ಕೆಲವರು ಆಗಾಗ ಉಸಿರು ಕಟ್ಟಿದಂತಾಗುತ್ತದೆ ಎಂದು ಹೇಳಿರುವುದನ್ನು ನೀವು ಕೇಳಿರುತ್ತೀರಿ. ಉಸಿರಾಟ ಕ್ರಮಬದ್ಧವಾಗಿದ್ದರೆ, ಆರೋಗ್ಯವೂ ಉತ್ತಮವಾಗಿರುತ್ತದೆ.
ಉಸಿರಾಟ ಅನೈಚ್ಛಿಕವಾಗಿ ನಡೆಯುವ ಕ್ರಿಯೆಯಾಗಿದ್ದರೂ, ಜೋರಾಗಿ, ಅವಸರದಿಂದ ಉಸಿರಾಡುವುದರಿಂದ ಮಾನಸಿಕ ಉದ್ವೇಗ, ಆತಂಕ ಹೆಚ್ಚಾಗುತ್ತದೆ. ಇದರ ಬಗ್ಗೆ ನಾವು ಗಮನ ಹರಿಸಲು ಸಾಧ್ಯವಾಗುವುದೇ ಇಲ್ಲ. ನಿಧಾನವಾಗಿ ಸುದೀರ್ಘವಾಗಿ ಉಸಿರಾಡುವುದರಿಂದ ಹಲವು ಪ್ರಯೋಜನಗಳಿವೆ. ಇದರಿಂದ ದೇಹಕ್ಕೆ ಆಮ್ಲಜನಕ ಹೆಚ್ಚಾಗಿ ಸಿಗುತ್ತದೆ. ದೇಹದಿಂದ ಇಂಗಾಲ ಹೊರಹೋಗಲು ಸಮಯ ಸಿಗುತ್ತದೆ. ಈ ರೀತಿಯ ಗಾಳಿ ವಿನಿಮಯದಿಂದ ದೇಹದ ಆರೋಗ್ಯ ಸುಧಾರಿಸುತ್ತದೆ ಎನ್ನುತ್ತಾರೆ ತಿಳಿದವರು.
ಅಲ್ಲದೇ, ದೀರ್ಘವಾಗಿ ಉಸಿರಾಡುವುದರಿಂದ ಹೃದಯದ ಬಡಿತ ಸಹಜವಾಗಿರುತ್ತದೆ. ರಕ್ತದ ಒತ್ತಡವೂ ಕಡಿಮೆಯಾಗುತ್ತದೆ. ಮಾಂಸಖಂಡಗಳು ಸಡಿಲವಾಗಿ ವಿಶ್ರಾಂತಿಗೆ ಅವಕಾಶ ಸಿಗುತ್ತದೆ. ಅಲ್ಲದೆ, ಮಾನಸಿಕ ಉದ್ವೇಗ, ಒತ್ತಡ ಕಡಿಮೆಯಾಗುತ್ತದೆ. ಮನಸ್ಸು ಪ್ರಶಾಂತವಾಗಿರುತ್ತದೆ. ಸಹಜವಾಗಿಯೇ ಆರೋಗ್ಯ ಸುಧಾರಿಸಿ ಆಯುಷ್ಯ ಹೆಚ್ಚುತ್ತದೆ.