ಬೆಂಗಳೂರು: ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯನ್ನು ರಾಜ್ಯದ ಎಲ್ಲಾ ಶಾಲೆಗಳಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಮಾರ್ಗಸೂಚಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದ್ದು, ಎಲ್ಲಾ ಶಾಲೆಗಳು ಅನುಸರಿಸಬೇಕೆಂದು ಸೂಚನೆ ನೀಡಲಾಗಿದೆ.
ಮಾರ್ಗಸೂಚಿಯ ಪ್ರಕಾರ ಪ್ರತಿ ಶಾಲೆಯಲ್ಲಿ ಮಕ್ಕಳ ಸುರಕ್ಷತಾ ಸಮಿತಿ ರಚಿಸಬೇಕು. ಇತ್ತೀಚೆಗೆ ಮಕ್ಕಳ ಮೇಲಿನ ದೌರ್ಜನ್ಯ, ಲೈಂಗಿಕ ಕಿರುಕುಳ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪೋಕ್ಸೋ ಕಾಯ್ದೆಯ ಸಮರ್ಪಕ ಅನುಷ್ಠಾನಕ್ಕೆ ಸರ್ಕಾರ ಕ್ರಮ ಕೈಗೊಂಡಿದೆ.
ಶಾಲೆಗಳಲ್ಲಿ ಮಕ್ಕಳ ಸುರಕ್ಷತಾ ಸಮಿತಿ ರಚಿಸಬೇಕಿದ್ದು, ಶಾಲಾ ಮುಖ್ಯಸ್ಥರು ಸಮಿತಿ ಅಧ್ಯಕ್ಷರಾಗಿರುತ್ತಾರೆ. ಕನಿಷ್ಠ ಇಬ್ಬರು ಶಿಕ್ಷಕರು, ಮೂವರು ಪೋಷಕರು, ಎಸ್.ಡಿ.ಎಂ.ಸಿ. ಅಧ್ಯಕ್ಷರು, ಇಬ್ಬರು ಮಕ್ಕಳು, ಒಬ್ಬರು ಆರೋಗ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಇರಬೇಕಿದೆ. ಪ್ರತಿ ಶಾಲೆಗಳಲ್ಲಿಯೂ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಮತ್ತು 14499 ಟೋಲ್ ಫ್ರೀ ಸಂಖ್ಯೆಯನ್ನು ಗೋಡೆ ಬರಹದಲ್ಲಿ ಬರೆಸಬೇಕು.
ಎಲ್ಲ ಶಾಲೆಗಳಲ್ಲಿ ದೂರು ಮತ್ತು ಸಲಹೆ ಪೆಟ್ಟಿಗೆಗಳನ್ನು ಮಕ್ಕಳಿಗೆ ನಿಲುಕುವಂತಹ ಎತ್ತರದಲ್ಲಿ ಸ್ಥಾಪಿಸಬೇಕು. ಶಾಲೆಯ ಅವಧಿ, ತರಗತಿವಾರು ವೇಳಾಪಟ್ಟಿ, ಅನುಮೋದಿತ ವಿಶೇಷ ತರಗತಿಗಳ ವೇಳಾಪಟ್ಟಿಯನ್ನು ಪೋಷಕರಿಗೆ ನೀಡಬೇಕು ಎಂದು ಹೇಳಲಾಗಿದೆ.
ಶಾಲೆಗಳಲ್ಲಿ ಎಲ್ಲಾ ಸಿಬ್ಬಂದಿಗೆ ಗುರುತಿನ ಚೀಟಿ ಕಡ್ಡಾಯವಾಗಿದೆ. ಶಾಲೆ ಆರಂಭಕ್ಕೆ ಅರ್ಧ ಗಂಟೆ ಮೊದಲು ಸಿಬ್ಬಂದಿ ಹಾಜರಾಗಬೇಕು. ಬೆಳಗ್ಗೆ ಮತ್ತು ಮಧ್ಯಾಹ್ನ ಕಡ್ಡಾಯವಾಗಿ ಮಕ್ಕಳ ಹಾಜರಾತಿ ದಾಖಲಿಸಬೇಕು. ಕಾರ್ಯನಿಮಿತ್ತ ಮಕ್ಕಳನ್ನು ಹೊರಗೆ ಕಳುಹಿಸುವಂತಿಲ್ಲ. ಮಕ್ಕಳು ಸುರಕ್ಷಿತವಾಗಿ ಮನೆ ತಲುಪಲು ಕ್ರಿಯಾಯೋಜನೆ ರೂಪಿಸಬೇಕು. ಶಾಲೆಗಳಲ್ಲಿ ಚೈಲ್ಡ್ ರೈಡ್ ಕ್ಲಬ್, ಮೀನಾ ತಂಡಗಳನ್ನು ರಚಿಸಬೇಕು. ಕಲಿಕೆಗೆ ಭಯಮುಕ್ತ, ಮಕ್ಕಳ ಸ್ನೇಹಿ ವಾತಾವರಣ ಸೃಷ್ಟಿಸಬೇಕೆಂದು ಹೇಳಲಾಗಿದೆ.