ಬೆಂಗಳೂರು: ರೌಡಿ ಶೀಟರ್ ಸೈಲೆಂಟ್ ಸುನೀಲ್ ಬಿಜೆಪಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರುವುದೂ ಅಲ್ಲದೇ ಬಿಜೆಪಿಗೆ ಸೇರ್ಪಡೆಗೆ ಪಕ್ಷದ ನಾಯಕರೇ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಸೈಲೆಂಟ್ ಸುನೀಲ್ ಬಗ್ಗೆ ಸಚಿವ ಅಶ್ವತ್ಥ ನಾರಾಯಣ ಸಮರ್ಥಿಸಿಕೊಂಡಿದ್ದು, ಅವಕಾಶ ಕೊಡದೇ ಆತನನ್ನು ನಿಂದಿಸುವುದು ಸರಿಯಲ್ಲ ಎಂದಿದ್ದಾರೆ.
ರೌಡಿ ಶೀಟರ್ ಸೈಲೆಂಟ್ ಸುನೀಲ್, ಬಿಜೆಪಿ ಕಾರ್ಯಕ್ರಮದ ವೇದಿಕೆಯಲ್ಲಿ ಸಂಸದ ತೇಜಸ್ವಿ ಸೂರ್ಯ, ಪಿ ಸಿ ಮೋಹನ್ ಜೊತೆಯಲ್ಲಿ ಕಾಣಿಸಿಕೊಂಡಿದ್ದು, ಬಿಜೆಪಿ ಸೇರ್ಪಡೆ ಬಗ್ಗೆ ಚಿಂತನೆ ನಡೆಸಿದ್ದಾನೆ ಎಂಬ ವಿಚಾರವಾಗಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಸಚಿವ ಅಶ್ವತ್ಥ ನಾರಾಯಣ, ಒಳ್ಳೆಯ ರೀತಿ ಬದುಕಿ ಬಾಳಲು ಎಲ್ಲರಿಗೂ ಅವಕಾಶವಿದೆ. ಯಾವುದೇ ವ್ಯಕ್ತಿಗೆ ಯಾವುದೇ ರೀತಿ ನಾಮಕರಣ ಮಾಡುವುದು ತಪ್ಪು. ಕಾನೂನಿನಲ್ಲಿ ಯಾರೇ ತಪ್ಪಿತಸ್ಥರಿದ್ದರೂ ಅವರು ತಪ್ಪಿತಸ್ಥರೆ. ಆದರೆ ಸೈಲೆಂಟ್ ಸುನೀಲ್ ಗೆ ಚಾರ್ಜ್ ಶೀಟ್ ಆಗಿಲ್ಲ, ಯಾವ ಶಿಕ್ಷೆ ಸಹ ಆಗಿಲ್ಲ. ಹೀಗಿರುವಾಗ ಯಾವುದೂ ಪ್ರಕರಣಗಳಿಲ್ಲದ ವ್ಯಕ್ತಿಗೆ ಬದುಕಲು ಅವಕಾಶ ಕೊಡಬೇಕು. ಅವಕಾಶ ಕೊಡದೇ ನಿಂದಿಸುವ ಕೆಲಸವಾಗಬಾರದು ಎಂದರು.
ಶಿಕ್ಷೆ ಆಗಿದ್ದರೆ ಚುನಾವಣೆಗೆ ನಿಲ್ಲಲು ಅವಕಾಶ ಇಲ್ಲ. ಕಾನೂನಿನ ಚೌಕಟ್ಟಿನಲ್ಲಿ ಬದುಕಲು ಅವಕಾಶ ಕೊಡೋಣ ಎಂದು ಹೇಳುವ ಮೂಲಕ ರೌಡಿ ಶೀಟರ್ ಪರವಾಗಿ ಸಮರ್ಥನೆ ಮಾಡಿಕೊಂಡಿದ್ದಾರೆ. ಸಚಿವರ ಸಮರ್ಥನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.