ಗಲ್ಫ್ ಆಫ್ ಮೆಕ್ಸಿಕೋದಲ್ಲಿ ಕ್ರೂಸ್ ಹಡಗಿನಿಂದ ನಾಪತ್ತೆಯಾದ ಮಹಿಳಾ ಪ್ರಯಾಣಿಕರೊಬ್ಬರನ್ನು ರೋಚಕ ರೀತಿಯಲ್ಲಿ ರಕ್ಷಣೆ ಮಾಡಲಾಗಿದೆ. ಹಲವು ಗಂಟೆ ನೀರಿನಲ್ಲಿದ್ದ ಪ್ರಯಾಣಿಕರನ್ನು ರಕ್ಷಣೆ ಮಾಡಿರುವ ಕುರಿತು ಕ್ರೂಸ್ ವರದಿ ನೀಡಿದೆ.
ಕಾರ್ನಿವಲ್ ವ್ಯಾಲರ್ ಎಂಬ ಹಡಗು ಮೆಕ್ಸಿಕೊದ ಕೊಝುಮೆಲ್‌ಗೆ ತೆರಳುತ್ತಿತ್ತು. ಈ ಸಂದರ್ಭದಲ್ಲಿ 28 ವರ್ಷದ ಮಹಿಳೆ ನಾಪತ್ತೆಯಾಗಿದ್ದರು. ಕಾರ್ನಿವಲ್ ಕ್ರೂಸ್ ಲೈನ್ ಪ್ರಕಾರ, ಮಹಿಳೆಯು ಸಹೋದರನೊಂದಿಗೆ ಪ್ರಯಾಣಿಸುತ್ತಿದ್ದಳು. ಈ ಸಂದರ್ಭದಲ್ಲಿ ಸಹೋದರ ರಾತ್ರಿ 11 ಗಂಟೆಗೆ ಬಾರ್‌ನಲ್ಲಿದ್ದು ನಂತರ ಶೌಚಾಲಯಕ್ಕೆ ಹೋಗಿದ್ದ. ಮರಳಿ ವಾಪಸ್ ತನ್ನ ಸ್ಟೇಟ್‌ರೂಮ್‌ಗೆ ಹಿಂತಿರುಗಿದಾಗ ಆತನ ಸಹೋದರಿ ಕಾಣೆಯಾಗಿದ್ದಳು. ಈ ಬಗ್ಗೆ ಆತ ದೂರು ನೀಡಿದ್ದ.
ಕ್ರೂಸ್ನಲ್ಲಿ ಎಲ್ಲಿಯೂ ಮಹಿಳೆ ಕಾಣಿಸಲಿಲ್ಲ. ಕೂಡಲೇ ಕೋಸ್ಟ್ ಗಾರ್ಡ್ ಶೋಧ ಮತ್ತು ರಕ್ಷಣಾ ಸಿಬ್ಬಂದಿ ಹುಡುಕಾಟ ನಡೆಸಿದರು. ಹತ್ತಿರದ ಹಡಗುಗಳಿಗೆ ಈ ಬಗ್ಗೆ ಸಂದೇಶ ರವಾನೆಯಾಗಿತ್ತು. ಈ ಸಂದರ್ಭದಲ್ಲಿ ಇನ್ನೊಂದು ಹಡಗಿನಲ್ಲಿದ್ದ ಕೋಸ್ಟ್ ಗಾರ್ಡ್ ಲೆಫ್ಟಿನೆಂಟ್ ಸೇಥ್ ಗ್ರಾಸ್, ಲೂಸಿಯಾನದ ಸೌತ್‌ವೆಸ್ಟ್ ಪಾಸ್‌ನ ದಕ್ಷಿಣಕ್ಕೆ 20 ಮೈಲುಗಳು (32 ಕಿಲೋಮೀಟರ್) ಮತ್ತು ಮಿಸ್ಸಿಸ್ಸಿಪ್ಪಿ ನದಿಯ ಸಮೀಪ ಒಬ್ಬ ವ್ಯಕ್ತಿಯನ್ನು ನೋಡಿದಂತಾಗಿದೆ ಎಂದು ವರದಿ ನೀಡಿದ.
ಇದಾದ ಮೇಲೆ ರಾತ್ರಿ 8:25 ರ ಸುಮಾರಿಗೆ ಹೆಲಿಕಾಪ್ಟರ್ ಮೂಲಕ ಆ ಜಾಗದ ಕಾರ್ಯಾಚರಣೆ ನಡೆಸಿದಾಗ ಮಹಿಳೆ ಅಲ್ಲಿಯೇ ನೀರಿನಲ್ಲಿ ಇದ್ದುದು ಕಂಡುಬಂದಿದೆ. ಕೂಡಲೇ ರಕ್ಷಣೆ ಮಾಡಲಾಗಿದೆ. ಅಷ್ಟು ಗಂಟೆಗಳಾದರೂ ಆಕೆ ಜೀವಂತ ಆಗಿರುವುದನ್ನು ನೋಡಿ ಎಲ್ಲರಿಗೂ ಅಚ್ಚರಿಯಾಗಿದೆ. ತುಂಬಾ ಸುಸ್ತಾಗಿದ್ದರಿಂದ ಚಿಕಿತ್ಸೆ ನೀಡಲಾಗುತ್ತಿದೆ.