ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಎಲೆ ಚುಕ್ಕಿ ರೋಗ ಹೆಚ್ಚಾಗಿದೆ. ಅತಿಯಾದ ಮಳೆಯ ಆದ ಕಾರಣ ಎಲೆಚುಕ್ಕಿ ರೋಗ ಉಲ್ಬಣಗೊಂಡಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ತೀರ್ಥಹಳ್ಳಿ ತಾಲೂಕಿನ ಉಂಟೂರು ಕೈಮರ ಬಳಿ ಎಲೆ ಚುಕ್ಕಿ ರೋಗ ಬಾಧಿತ ಅಡಿಕೆ ತೋಟ ವೀಕ್ಷಿಸಿ ಅವರು ಮಾತನಾಡಿ, ಎಲೆ ಚುಕ್ಕಿ ರೋಗ ಬಾದಿತ ಅಡಿಕೆ ತೋಟಗಳ ಬೆಳೆಗಾರರಿಗೆ ತಕ್ಷಣದ ನೆರವಾಗಿ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯ ಲಾಭ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.
ರಾಜ್ಯದಲ್ಲಿ 42,000 ಹೆಕ್ಟೇರ್ ನಷ್ಟು ಅಡಿಕೆ ತೋಟಗಳು ಎಲೆ ಚುಕ್ಕಿ ರೋಗ ಬಾಧಿತವಾಗಿದ್ದು, ಅಧ್ಯಯನ ನಡೆಸಿ ಸಮಗ್ರ ವರದಿ ನೀಡಲು ತಜ್ಞರ ಸಮಿತಿ ರಚಿಸಲಾಗಿದೆ. ಅಡಿಕೆ ತೋಟ ಮತ್ತು ಬೆಳೆಗಾರರ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ರೋಗ ನಿರ್ವಹಣೆಗೆ ಔಷಧಿ ಖರೀದಿಗೆ 10 ಕೋಟಿ ರೂ. ಖರ್ಚು ಮಾಡಲಾಗಿದೆ. ತಜ್ಞರ ವರದಿ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.