ಹುಬ್ಬಳ್ಳಿ: ಹೆಸ್ಕಾಂ ಅಧಿಕಾರಿಗಳ ವಿರುದ್ಧ 25% ಕಮಿಷನ್ ಆರೋಪ ಮಾಡಿರುವ ಹುಬ್ಬಳ್ಳಿ ವಿದ್ಯುತ್ ಗುತ್ತಿಗೆದಾರರ ಸಂಘ, ಲೋಕಾಯುಕ್ತಕ್ಕೆ ದೂರು ನೀಡಿದೆ.
ವಿದ್ಯುತ್ ಸರಬರಾಜು ಕಂಪನಿಯಲ್ಲಿ ವಿವಿಧ ಕಾಮಗಾರಿಗಳಿಗೆ 472 ಕೋಟಿ ರೂಪಾಯಿ ಟೆಂಡರ್ ಕರೆಯಲಾಗಿದೆ. ರೈತರ ನೀರಾವರಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಹೆಚ್ ಟಿ ಲೈನ್ ಹಾಗೂ ಎಲ್ ಟಿ ಲೈನ್ ನಿರ್ಮಿಸುವುದಾಗಿ ಹೇಳಿ ಲಿಂಕ್ ಲೈನ್ ಕಾಮಗಾರಿಗೆ 34 ಲಾಟ್ ಗಳಲ್ಲಿ ಟೆಂಡರ್ ನೀಡಲಾಗಿದೆ. ಆದರೆ ಅವೈಜ್ಞಾನಿಕ ಟೆಂಡರ್ ಕರೆದು ಭ್ರಷ್ಟಾಚಾರವೆಸಗಲಾಗಿದೆ ಎಂದು ವಿದ್ಯುತ್ ಗುತ್ತಿಗೆದಾರರ ಸಂಘ ಆರೋಪಿಸಿದೆ.
ಹೆಸ್ಕಾಂ ಎಂ.ಡಿ. ಭಾರತಿ ಹಾಗೂ ತಾಂತ್ರಿಕ ನಿರ್ದೇಶಕ ಶ್ರೀಕಾಂತ್ ಸಸಾಲೊಟ್ಟಿ ವಿರುದ್ಧ 25% ಕಮಿಷನ್ ಪಡೆದು ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸಿ ಗುತ್ತಿಗೆದಾರರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಪರ್ಸಂಟೇಜ್ ಆಸೆಗಾಗಿ ಹೊರರಾಜ್ಯದ ಗುತ್ತಿಗೆದಾರರರಿಗೆ ಟೆಂಡರ್ ನೀಡಿದ್ದಾರೆ. ನಮ್ಮ ರಾಜ್ಯದವರಿಗೆ ಗುತ್ತಿಗೆ ನೀಡಿದರೆ 300ಕ್ಕೂ ಹೆಚ್ಚು ಜನರಿಗೆ ಕೆಲಸ ಸಿಗುತ್ತಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.