ಚೀನಾದಲ್ಲಿ ಬಾಲ್ಯದಲ್ಲಿ ಅಂಬೆಗಾಲು ಇಡುವಂತೆ ನಾಲ್ಕು ಕಾಲುಗಳ ಮೇಲೆ ನಡೆಯುವ ಹೊಸ ಪ್ರವೃತ್ತಿ ಶುರುವಾಗಿದೆ. ಇದು ಮಾನವ ವಿಕಾಸದ ಸಿದ್ಧಾಂತವನ್ನು ಮರುಚಿಂತನೆಯನ್ನು ಉಂಟುಮಾಡುವ ವಿಶಿಷ್ಟ ವ್ಯಾಯಾಮವಾಗಿದೆಯಂತೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (SCMP) ಈ ವರದಿಯಲ್ಲಿ ಈ ಬಗ್ಗೆ ಉಲ್ಲೇಖಿಸಿದೆ. ಈ ವರದಿಯ ಪ್ರಕಾರ ಬೀಜಿಂಗ್‌ನ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕಳೆದ ವಾರ ಆಟದ ಮೈದಾನದಲ್ಲಿ ವೃತ್ತಗಳಲ್ಲಿ ತೆವಳುತ್ತ ಹೊಸತನಕ್ಕೆ ನಾಂದಿ ಹಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ವಿಷಯ ವೈರಲ್ ಆಗುತ್ತಿದೆ. ಇದರಲ್ಲಿ ವಿದ್ಯಾರ್ಥಿಗಳು ತೆವಳುತ್ತಾ ನಡೆಯುವುದುನ್ನು ನೋಡಬಹುದು. ಇದನ್ನು ಕ್ವಾಡ್ರುಪ್ಡ್ ಮೂವ್ಮೆಂಟ್ ಎಂದೂ ಕರೆಯಲಾಗುತ್ತದೆ. ಬೆಕ್ಕುಗಳು, ಮೊಸಳೆಗಳು ಮತ್ತು ಕರಡಿಗಳಂತಹ ಪ್ರಾಣಿಗಳ ಚಲನವಲನಗಳಿಂದ ಇದು ಸ್ಫೂರ್ತಿ ಪಡೆದಿದೆ.
ಇದು ವಿನೋದ ಮಾತ್ರವಲ್ಲ, ಆರೋಗ್ಯಕ್ಕೂ ಪ್ರಯೋಜನವನ್ನು ನೀಡುತ್ತದೆ ಎಂದು ಚೀನಿಯರು ಹೇಳಿದ್ದಾರೆ. ಚೀನಾದ ಇನ್‌ಸ್ಟಾಗ್ರಾಮ್ ಪ್ಲಾಟ್‌ಫಾರ್ಮ್ ಕ್ಸಿಯಾವೊಂಗ್‌ಶುನಲ್ಲಿ, “ಕ್ಸಿಯಾಹೋಂಗ್‌ಶು ಕ್ರಾಲಿಂಗ್ ಕಾಂಪಿಟೇಷನ್” ಎಂಬ ಹ್ಯಾಶ್ಟ್ಯಾಗ್ನೊಂದಿಗೆ ಇದರ ಫೋಟೋ ವೈರಲ್ ಆಗಿದೆ.
ಕೋವಿಡ್ನಿಂದ ತತ್ತರಿಸಿಹೋಗಿರುವ ಚೀನಿಗರು, ಒತ್ತಡ ಮತ್ತು ಬೇಸರವನ್ನು ನಿವಾರಿಸಲು ಹಾಗೂ ಆರೋಗ್ಯ ಕಾಪಾಡಿಕೊಳ್ಳಲು ಕಾಲೇಜು ವಿದ್ಯಾರ್ಥಿಗಳಿಗೆ ಈ ವ್ಯಾಯಾಮ ಮಾಡಿಸುತ್ತಿರುವುದಾಗಿ ಹೇಳಲಾಗಿದೆ. ಇದಕ್ಕೂ ಮುನ್ನ ಜಿಯಾಂಗ್‌ಸು ಪ್ರಾಂತ್ಯದ ಝಾಂಗ್‌ಜಿಯಾಗ್ಯಾಂಗ್‌ನಲ್ಲಿರುವ ಕ್ಸಿಯಾಂಗ್‌ಶಾನ್ ಪರ್ವತದಲ್ಲಿ ಜನರ ಗುಂಪೊಂದು ಮೊಸಳೆಗಳಂತೆ ನೆಲದ ಮೇಲೆ ಹರಿದಾಡುತ್ತಿರುವ ದೃಶ್ಯ ಕಂಡು ಬಂದಿತ್ತು.