ಫಿಫಾ ವಿಶ್ವಕಪ್ ಫುಟ್ಬಾಲ್‌ನ ರಂಜನೀಯ ಕ್ಷಣಗಳು, ಹಲವು ವಿಶೇಷತೆಗಳು ಫುಟ್ಬಾಲ್ ಅಭಿಮಾನಿಗಳನ್ನು ಖುಷಿಪಡಿಸುತ್ತಿವೆ.
ಜರ್ಮನಿ ವಿರುದ್ಧ ತಮ್ಮ ಐತಿಹಾಸಿಕ ವಿಜಯದ ನಂತರ ಜಪಾನಿನ ಫುಟ್ಬಾಲ್ ತಂಡವು ತಮ್ಮ ಅದ್ಭುತ ಗೆಸ್ಚರ್ ಮೂಲಕ ನೆಟ್ಟಿಗರ ಹೃದಯ ಗೆದ್ದಿದೆ.
ಜಪಾನ್ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಖಲೀಫಾ ಇಂಟರ್ನ್ಯಾಷನಲ್ ಸ್ಟೇಡಿಯಂನಿಂದ ಹೊರಡುವ ಮೊದಲು ತಮ್ಮ ಡ್ರೆಸ್ಸಿಂಗ್ ಕೋಣೆಯನ್ನು ಸ್ವಚ್ಛಗೊಳಿಸುವ ಮೂಲಕ ಗಮನ ಸೆಳೆದಿದ್ದಾರೆ.
ನಾಲ್ಕು ಬಾರಿಯ ಚಾಂಪಿಯನ್ ಜರ್ಮನಿಯ ವಿರುದ್ಧ ಜಪಾನ್ 2-1 ಗೋಲುಗಳಿಂದ ಗೆಲವು ಸಾಧಿಸಿತು. ಪೆನಾಲ್ಟಿ ಕಾರ್ನರ್‌ನಿಂದ 33ನೇ ನಿಮಿಷದಲ್ಲಿ ಜರ್ಮನ್ನರು 1-0 ಮುನ್ನಡೆ ಸಾಧಿಸಿದ್ದರು. ಆದರೆ ದ್ವಿತೀಯಾರ್ಧದಲ್ಲಿ ರಿಟ್ಸು ಡೊನ್ ಮತ್ತು ಟಕುಮಾ ಅಸಾನೊ ಅವರ ಗೋಲುಗಳು ಜಪಾನ್ ಐತಿಹಾಸಿಕ ವಿಜಯಕ್ಕೆ ಕಾರಣವಾಯಿತು.
ಮೈದಾನದಲ್ಲಿ ಅಸಾಧಾರಣ ಪ್ರದರ್ಶನಕ್ಕಾಗಿ ಇಡೀ ತಂಡ ಶ್ಲಾಘನೆಗೊಳಗಾಯಿತು. ಅದೇ ರೀತಿ ಜಪಾನಿನ ತಂಡವು ಮೈದಾನದ ಹೊರಗೆ ಕೂಡ ಸ್ವಚ್ಛತೆಯ ಕಾರಣದಿಂದ ಪ್ರಪಂಚದಾದ್ಯಂತ ಲಕ್ಷಾಂತರ ಜನರನ್ನು ವಿಸ್ಮಯಗೊಳಿಸಿತು.
ಆಟಗಾರರು ಮಾತ್ರವಲ್ಲ, ಜಪಾನಿನ ಅಭಿಮಾನಿಗಳು ಸಹ ಖಲೀಫಾ ಕ್ರೀಡಾಂಗಣದಲ್ಲಿ ತಮ್ಮ ನಡವಳಿಕೆ ಮೂಲಕ ಅನೇಕರನ್ನು ಪ್ರೇರೇಪಿಸುವಲ್ಲಿ ಯಶಸ್ವಿಯಾದರು. ಅವರೂ ಸಹ ಸ್ಟ್ಯಾಂಡ್‌ಗಳಿಂದ ಕಸ ಸಂಗ್ರಹಿಸಿ, ತಾವು ಹೊರಡುವ ಮೊದಲು ಕ್ರೀಡಾಂಗಣ ಸ್ವಚ್ಛಗೊಳಿಸಿದರು.
ಫಿಫಾ ಹಂಚಿಕೊಂಡಿರುವ ಚಿತ್ರದಲ್ಲಿ, ಡ್ರೆಸ್ಸಿಂಗ್ ರೂಮ್‌ನೊಳಗಿನ ಸ್ವಚ್ಛತೆ ಕಾಣಬಹುದು. ಈ ರೀತಿ ಮಾಡಿದ್ದು ಇದೇ ಮೊದಲಲ್ಲ. ವಿಶ್ವಕಪ್ 2018 ರ ಸಮಯದಲ್ಲಿ ರಷ್ಯಾದಲ್ಲಿ ತಮ್ಮ ದೇಶದ ಪಂದ್ಯಗಳ ನಂತರ ಜಪಾನಿನ ಅಭಿಮಾನಿಗಳು ಕ್ರೀಡಾಂಗಣಗಳಲ್ಲಿ ಸ್ಟ್ಯಾಂಡ್‌ಗಳನ್ನು ಸ್ವಚ್ಛಗೊಳಿಸಿ ಪ್ರಪಂಚಕ್ಕೆ ಸಂದೇಶ ಕಳಿಸಿದ್ದರು.