ತುಮಕೂರು: ತುಮಕೂರು ಜಿಲ್ಲೆಯ ಗ್ರಾಮಾಂತರ ಕ್ಷೇತ್ರದ ಶಾಸಕ ಗೌರಿಶಂಕರ್ ಹಾಗೂ ಮಾಜಿ ಶಾಸಕ ಸುರೇಶ್ ಗೌಡ ನಡುವಿನ ಜಿದ್ದಾಜಿದ್ದಿ ತಾರಕಕ್ಕೇರಿದ್ದು, ಹಾಲಿ ಶಾಸಕರು ತನ್ನ ಕೊಲೆಗೆ ಸುಪಾರಿ ಕೊಟ್ಟಿದ್ದಾರೆ ಎಂದು ಸುರೇಶ್ ಗೌಡ ಆರೋಪಿಸಿದ್ದಾರೆ.
ಜೈಲಿನಲ್ಲಿ ಇರುವ ಶಾಸಕರ ಬಲಗೈ ಬಂಟ ಹಿರೇಹಳ್ಳಿ ಮಹೇಶ್ ಜೊತೆ ಸಂಪರ್ಕದಲ್ಲಿರುವ ಗೌರಿಶಂಕರ್, 5 ಕೋಟಿ ರೂಪಾಯಿಗೆ ಸುಪಾರಿ ಕೊಟ್ಟಿದ್ದಾರೆ. ವಿಜಯದಶಮಿ ಹಬ್ಬದ ಹಿಂದಿನ ದಿನವೇ ಈ ಬಗ್ಗೆ ನಾನು ಸಿಎಂ ಹಾಗೂ ಗೃಹ ಸಚಿವರಿಗೆ ದೂರು ನೀಡಿದ್ದೆ. ಪೊಲೀಸ್ ಕಮಿಷನರ್ ಅವರಿಗೂ ದೂರು ಕೊಟ್ಟಿದ್ದೇನೆ. ಕಳೆದ ನಾಲ್ಕು ತಿಂಗಳಿಂದ ನನ್ನ ಕೊಲೆಗೆ ಸಂಚು ನಡೆಸಲಾಗುತ್ತಿದೆ ಈ ಬಗ್ಗೆ ನನಗೆ ಇಂಟಲಿಜನ್ಸ್ ನಿಂದಲೂ ಮಾಹಿತಿ ಬಂದಿದೆ ಎಂದು ಸುರೇಶ್ ಗೌಡ ತಿಳಿಸಿದ್ದಾರೆ.
ಇನ್ನು ಶಾಸಕ ಗೌರಿ ಶಂಕರ್, ಹಿರೇಹಳ್ಳಿ ಮಹೇಶ್ ಜೊತೆಗೆ ಅಟ್ಟಿಕಾ ಗೋಲ್ಡ್ ಕಂಪನಿ ಮಾಲೀಕ ಬಾಬು ವಿರುದ್ಧವೂ ಸುರೇಶ್ ಗೌಡ ಆರೋಪಿಸಿದ್ದಾರೆ. ಮೂವರು ಸೇರಿ ಮಾಜಿ ಮೇಯರ್ ಹತ್ಯೆ ಮಾಡಿ ಜೈಲು ಸೇರಿದ್ದ ಆರೋಪಿಗಳನ್ನು ಸಂಪರ್ಕಿಸಿ ಕೊಲೆಗೆ ಸುಪಾರಿ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.