ವಿಶ್ವದಲ್ಲಿ ಆರ್ಥಿಕ ಹಿಂಜರಿತದ ಲಕ್ಷಣಗಳು ಈಗಾಗಲೇ ಗೋಚರವಾಗುತ್ತಿವೆ. ಮುಂದಿನ ಆರು ತಿಂಗಳು ಅತ್ಯಂತ ಕಠಿಣವಾಗಿರಲಿವೆ ಎಂದು ಹೇಳಲಾಗುತ್ತಿದ್ದು, ಹೀಗಾಗಿ ಇದನ್ನು ಮುಂಚಿತವಾಗಿ ಊಹಿಸಿರುವ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಫ್ರಿಡ್ಜ್, ವಾಹನಗಳನ್ನು ಖರೀದಿಸದೆ ಉಳಿತಾಯದತ್ತ ಗಮನ ನೀಡಿ ಎಂದಿದ್ದರು.
ಈ ಆರ್ಥಿಕ ಹಿಂಜರಿತದ ಪರಿಣಾಮ ಐಟಿ ಕಂಪನಿಗಳ ಮೇಲೆ ತೀವ್ರವಾಗಿ ಬೀರಿದ್ದು, ಅಮೆಜಾನ್, ಟ್ವಿಟ್ಟರ್, ಸಿಸ್ಕೋ ಮೊದಲಾದ ಕಂಪನಿಗಳು ಸಾವಿರಾರು ಸಂಖ್ಯೆಯಲ್ಲಿ ತಮ್ಮ ಉದ್ಯೋಗಿಗಳನ್ನು ಮನೆಗೆ ಕಳುಹಿಸುತ್ತಿವೆ. ಅಲ್ಲದೆ ಅಲ್ಫಾಬೆಟ್ ಒಡೆತನದ ಗೂಗಲ್ ಕೂಡ ಕಾರ್ಯಕ್ಷಮತೆ ಆಧರಿಸಿ 10,000ಕ್ಕೂ ಅಧಿಕ ಉದ್ಯೋಗಿಗಳಿಗೆ ಗೇಟ್ ಪಾಸ್ ನೀಡಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ.
ಭಾರತದ ಮೇಲೂ ಈ ಆರ್ಥಿಕ ಹಿಂಜರಿತದ ಪರಿಣಾಮ ನಿಧಾನವಾಗಿ ಬೀರತೊಡಗಿದ್ದು, ಹೊಸದಾಗಿ ಇಂಜಿನಿಯರಿಂಗ್ ಮುಗಿಸಿಕೊಂಡು ಬಂದಿದ್ದವರನ್ನು ಆಯ್ಕೆ ಮಾಡಿದ್ದ ಕಂಪನಿಗಳು ಅವರುಗಳಿಗೆ ಆಫರ್ ಲೆಟರ್ ನೀಡಲು ಹಿಂದೇಟು ಹಾಕುತ್ತಿವೆ ಎಂದು ಹೇಳಲಾಗಿದೆ. ಕೆಲವೊಂದು ಕಂಪನಿಗಳಂತೂ ನಿಮ್ಮ ಸಾಮರ್ಥ್ಯ ನಿರೀಕ್ಷಿತ ಮಟ್ಟದಲ್ಲಿಲ್ಲ ಎಂಬ ನೆಪ ಹೇಳಿ ಇ-ಮೇಲ್ ಕಳಿಸುತ್ತಿವೆ ಎಂದು ಮೂಲಗಳು ತಿಳಿಸಿವೆ.
ಆದರೆ ಕೆಲ ಭಾರತೀಯ ತಜ್ಞರು ಭಾರತದ ಐಟಿ ಕ್ಷೇತ್ರದ ಮೇಲೆ ಈ ಆರ್ಥಿಕ ಹಿಂಜರಿತ ಅಷ್ಟಾಗಿ ಪರಿಣಾಮ ಬೀರುವುದಿಲ್ಲ. ಅಲ್ಲದೆ ಈಗಾಗಲೇ ನೇಮಕಾತಿ ಪತ್ರ ಪಡೆದುಕೊಂಡಿರುವವರಿಗೆ ಮುಂದಿನ ದಿನಗಳಲ್ಲಿ ಅವಕಾಶ ಸಿಗಲಿದೆ ಎಂಬ ಭರವಸೆಯ ಮಾತುಗಳನ್ನು ಹೇಳುತ್ತಿದ್ದಾರೆ.