ಅಪ್ರಾಪ್ತ ವಯಸ್ಕರ ಮೇಲಿನ ಲೈಂಗಿಕ ಅಪರಾಧಗಳನ್ನು ತಡೆಗಟ್ಟುವ ಸಲುವಾಗಿ ಪೋಕ್ಸೋ ಕಾಯ್ದೆಯನ್ನು ಜಾರಿಗೆ ತರಲಾಗಿದ್ದು, ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ಕಾಯ್ದೆ ಅಡಿ ಅಪರಾಧಿಯೊಬ್ಬನಿಗೆ ಅತಿ ದೀರ್ಘಾವಧಿ ಶಿಕ್ಷೆ ವಿಧಿಸಲಾಗಿದೆ.
9 ವರ್ಷದ ಬಾಲಕಿ ಮೇಲೆ ಲೈಂಗಿಕ ಅಪರಾಧ ಎಸಗಿದ ಬಿಹಾರ ಮೂಲದ ನಾಜೀಮ್ ಎಂಬಾತನಿಗೆ ಮೈಸೂರಿನ ಪೋಕ್ಸೋ ವಿಶೇಷ ನ್ಯಾಯಾಲಯ 43 ವರ್ಷಗಳ ಕಠಿಣ ಶಿಕ್ಷೆಯನ್ನು ವಿಧಿಸಿದೆ. 2021 ರಲ್ಲಿ ನಡೆದಿದ್ದ ಈ ಪ್ರಕರಣ ಕುರಿತಂತೆ ಮೈಸೂರಿನ ಮಹಿಳಾ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಟಿ. ನರಸೀಪುರ ರಸ್ತೆಯಲ್ಲಿರುವ ನಟರೊಬ್ಬರ ತೋಟದ ಮನೆಯಲ್ಲಿ ಕುದುರೆ ಲಾಳ ಕಟ್ಟುವ ಕೆಲಸ ಮಾಡುತ್ತಿದ್ದ 33 ವರ್ಷದ ನಾಜೀಮ್, ಬಾಲಕಿಗೆ ಅಶ್ಲೀಲ ವಿಡಿಯೋ ತೋರಿಸಿ ಲೈಂಗಿಕ ಅಪರಾಧ ಎಸಗಿದ್ದ. ಅಲ್ಲದೆ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ.
ಬಾಲಕಿ ಬಳಿಕ ಈ ವಿಷಯವನ್ನು 2021ರ ಸೆಪ್ಟೆಂಬರ್ 15 ರಂದು ತನ್ನ ಪೋಷಕರಿಗೆ ತಿಳಿಸಿದ್ದು, ತೋಟದ ಮನೆ ವ್ಯವಸ್ಥಾಪಕರ ಮುಖಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ವಿಚಾರಣೆ ನಡೆಸಿದ್ದ ಮಹಿಳಾ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.