ಪ್ರಯಾಣದ ಸಮಯದಲ್ಲಿ ಎಷ್ಟೋ ಜನರಿಗೆ ವಾಂತಿಯಾಗುವುದು, ತಲೆತಿರುಗುವುದು, ಹೊಟ್ಟೆ ತೊಳಸುವಿಕೆ, ವಾಕರಿಕೆ ಹೀಗೆ ಹಲವು ರೀತಿಯ ಸಮಸ್ಯೆಗಳಾಗುತ್ತವೆ. ಇದನ್ನು ಮೋಶನ್ ಸಿಕ್ನೆಸ್ ಎಂದು ಕರೆಯಲಾಗುತ್ತದೆ.
ಬಹಳ ಸಮಯದ ನಂತರ ಪ್ರಯಾಣ ಮಾಡಿದ್ರೆ ವಾಂತಿಯಾಗುತ್ತದೆ ಅನ್ನೋದು ಹಲವರ ಭಾವನೆ. ಪ್ರಯಾಣದ ವೇಳೆ ಕಾಡುವ ಈ ರೀತಿಯ ತೊಂದರೆಗಳಿಗೆ ಕೆಲವೊಂದು ಸುಲಭದ ಮನೆಮದ್ದುಗಳಿವೆ.
ಶುಂಠಿ: ಪ್ರಯಾಣದ ಸಮಯದಲ್ಲಿ ನಿಮಗೆ ವಾಕರಿಕೆ ಬರುವುದು ಅಥವಾ ಅಥವಾ ವಾಂತಿ ಬಂದಂತೆ ಅನಿಸಿದರೆ ಜೊತೆಯಲ್ಲಿ ಶುಂಠಿಯನ್ನು ಇಟ್ಟುಕೊಳ್ಳಿ. ಮೋಷನ್ ಸಿಕ್ ನೆಸ್ ಕಾಡಿದಾಗಲೆಲ್ಲ ಶುಂಠಿಯ ಸಿಪ್ಪೆ ಸುಲಿದು ಸಣ್ಣ ತುಂಡನ್ನು ಬಾಯಿಯಲ್ಲಿ ಇಟ್ಟುಕೊಳ್ಳಿ. ದೀರ್ಘ ಪ್ರಯಾಣದ ಸಮಯದಲ್ಲಿ ನೀವು ಈ ರೀತಿ ಮಾಡಿದ್ರೆ ವಾಂತಿ ಹಾಗೂ ವಾಕರಿಕೆ ಕಡಿಮೆಯಾಗುತ್ತದೆ.
ಪುದೀನಾ ಎಣ್ಣೆ: ವಾಹನ ಪ್ರಯಾಣದ ಸಮಯದಲ್ಲಿ ಪುದೀನಾ ಎಣ್ಣೆಯ ಬಾಟಲಿಯನ್ನು ಕೊಂಡೊಯ್ಯಿರಿ. ಈ ಎಣ್ಣೆಯ ಎರಡು ಹನಿಗಳನ್ನು ಕರವಸ್ತ್ರದ ಮೇಲೆ ಹಾಕಿಕೊಂಡು ಅದರ ಪರಿಮಳವನ್ನು ಆಘ್ರಾಣಿಸಿ. ಹೀಗೆ ಮಾಡುವುದರಿಂದ ವಾಂತಿ ಮತ್ತು ವಾಕರಿಕೆ ಸಮಸ್ಯೆ ನಿವಾರಣೆಯಾಗುತ್ತದೆ. ಇದು ವಾಕರಿಕೆಯ ಲಕ್ಷಣಗಳನ್ನು ಕಡಿಮೆ ಮಾಡುವಂಥ ಪರಿಮಳವನ್ನು ಹೋಂದಿದೆ.
ಹೆಚ್ಚು ನೀರು ಕುಡಿಯಿರಿ: ಸಾಕಷ್ಟು ನೀರು ಕುಡಿಯುವುದರಿಂದ ದೇಹವನ್ನು ಹೈಡ್ರೇಟ್ ಆಗಿ ಇಟ್ಟುಕೊಳ್ಳಬಹುದು. ಚೆನ್ನಾಗಿ ನೀರು ಕುಡಿದರೆ ಪ್ರಯಾಣದ ಸಮಯದಲ್ಲಿ ತೊಂದರೆಯಾಗುವುದಿಲ್ಲ. ಮೋಶನ್ ಸಿಕ್ನೆಸ್ ಕೂಡ ಕಡಿಮೆಯಾಗುತ್ತದೆ. ಡಿಹೈಡ್ರೇಶನ್ನಿಂದ ವಾಂತಿ ಮತ್ತು ವಾಕರಿಕೆಯ ಸಮಸ್ಯೆ ಹೆಚ್ಚಾಗುತ್ತದೆ. ಹಾಗಾಗಿ ಚೆನ್ನಾಗಿ ನೀರು ಕುಡಿಯಬೇಕು.
ನಿಂಬೆಹಣ್ಣು: ಪ್ರಯಾಣದ ಸಮಯದಲ್ಲಿ ಯಾವಾಗಲೂ ನಿಂಬೆಹಣ್ಣನ್ನು ಇಟ್ಟುಕೊಳ್ಳಿ. ನಿಂಬೆಹಣ್ಣಿನ ಪರಿಮಳ ತೆಗೆದುಕೊಂಡರೆ ಹೊಟ್ಟೆತೊಳಸುವುದು ಮತ್ತು ವಾಂತಿ ಕಡಿಮೆಯಾಗುತ್ತದೆ. ನಿಂಬೆಯ ಬಲವಾದ ಪರಿಮಳವು ಮೋಶನ್ ಸಿಕ್ನೆಸ್ ಲಕ್ಷಣಗಳನ್ನು ನಿವಾರಿಸುತ್ತದೆ.