ಪೇಟಿಎಂ ಷೇರುಗಳ ಕುಸಿತ ಮುಂದುವರಿದಿದೆ. ಇದುವರೆಗೆ ಕಂಪನಿಯ ಷೇರುಗಳು ಶೇ.70 ಕ್ಕಿಂತಲೂ ಅಧಿಕ ಮಟ್ಟದಲ್ಲಿ ಕುಸಿದಿವೆ. ಸರಿಯಾಗಿ ಒಂದು ವರ್ಷದ ಹಿಂದೆ ಹೂಡಿಕೆದಾರರು ಉತ್ತಮ ಗಳಿಕೆಯ ನಿರೀಕ್ಷೆಯಿಂದ Paytm IPO ನಲ್ಲಿ ಹಣವನ್ನು ಹೂಡಿಕೆ ಮಾಡಿದ್ದರು. ಆದರೆ ವರ್ಷ ಕಳೆಯುವಷ್ಟರಲ್ಲಿ ಪೇಟಿಎಂ ಷೇರುಗಳು ಪಾತಾಳಕ್ಕಿಳಿದಿವೆ. ಹಣ ಹೂಡಿಕೆ ಮಾಡಿದವರೆಲ್ಲ ಕಂಗಾಲಾಗಿದ್ದಾರೆ.
ಬುಧವಾರದ ವಹಿವಾಟಿನ ನಂತರವೂ ಪೇಟಿಎಂ ಕಂಪನಿಯ ಷೇರುಗಳು ಶೇ.5.6ರಷ್ಟು ಕುಸಿತದೊಂದಿಗೆ 450ರ ಮಟ್ಟದಲ್ಲಿ ಮುಕ್ತಾಯಗೊಂಡಿವೆ. ಇದುವರೆಗೆ ದೇಶದಲ್ಲಿ 18,300 ಕೋಟಿ ರೂಪಾಯಿಗಳ ಎರಡನೇ ಅತಿ ದೊಡ್ಡ ಐಪಿಒದೊಂದಿಗೆ ಹೊರಬಂದಿರುವ Paytmನ ಮೂಲ ಕಂಪನಿ One97 ಕಮ್ಯುನಿಕೇಷನ್ನ ಷೇರುಗಳು ಕೂಡ ಕುಸಿತ ದಾಖಲಿಸಿವೆ. ಮಂಗಳವಾರ ಕಂಪನಿಯ ಷೇರುಗಳು ಸುಮಾರು 8 ಪ್ರತಿಶತದಷ್ಟು ಕುಸಿದಿದ್ದವು. ಬುಧವಾರವೂ ಶೇ.5ರಷ್ಟು ಕುಸಿತ ದಾಖಲಿಸಿವೆ.
ಕಂಪನಿಯ ಷೇರುಗಳು ಪ್ರಸ್ತುತ 52 ವಾರಗಳ ಕನಿಷ್ಠ ಮಟ್ಟದಲ್ಲಿ ವಹಿವಾಟು ನಡೆಸುತ್ತಿವೆ. ಪೇಟಿಎಂ ಷೇರಿನ ಇದುವರೆಗಿನ ಕನಿಷ್ಠ ಮಟ್ಟ 438.35 ರೂಪಾಯಿ ಇದೆ. ಈ ಷೇರುಗಳು ಹಿಂದೊಮ್ಮೆ 1873.70 ರೂಪಾಯಿ ದಾಖಲೆಯ ಮಟ್ಟಕ್ಕೂ ಏರಿಕೆಯಾಗಿದ್ದವು.
ಪೇಟಿಎಂ ಕಂಪನಿಯು 10 ವರ್ಷಗಳ ಹಿಂದೆ ವ್ಯವಹಾರವನ್ನು ಪ್ರಾರಂಭಿಸಿತ್ತು. ಮಾರುಕಟ್ಟೆಯಲ್ಲಿ ಮೊಬೈಲ್ ರೀಚಾರ್ಜ್ ವೇದಿಕೆಯಾಗಿ ವಹಿವಾಟು ಆರಂಭಿಸಿದ್ದ ಪೇಟಿಎಂ, 2016ರಲ್ಲಿ ನೋಟು ಅಮಾನ್ಯೀಕರಣದ ನಂತರ Paytm ಪೇಮೆಂಟ್ ಸೇವೆಯನ್ನು ಪರಿಚಯಿಸಿತ್ತು. ಆಗ ಪೇಟಿಎಂ ಜನಪ್ರಿಯತೆಯ ಉತ್ತುಂಗದಲ್ಲಿತ್ತು.