ಭಾರತದ ಅತ್ಯಂತ ಶ್ರೀಮಂತ ಉದ್ಯಮಿಗಳಾದ ಮುಖೇಶ್ ಅಂಬಾನಿ ಹಾಗೂ ಗೌತಮ್ ಅದಾನಿ ಮಧ್ಯೆ ಪೈಪೋಟಿ ಶುರುವಾಗಿದೆ. ಇಬ್ಬರೂ ಕಂಪನಿಯೊಂದನ್ನು ಖರೀದಿಸಲು ಜಿದ್ದಿಗೆ ಬಿದ್ದಿದ್ದಾರೆ.
ಇವರೊಂದಿಗೆ ಸರ್ಕಾರವೂ ಈ ಕಂಪನಿಯನ್ನು ಖರೀದಿಸಲು ಹರಾಜು ಕೂಗುತ್ತಿದೆ. ಯಾಕಂದ್ರೆ ಈ ಕಂಪನಿ ಸಾಲದ ಸುಳಿಯಲ್ಲಿ ಮುಳುಗಿದೆ. ಇದನ್ನು ನವೆಂಬರ್ 25 ರಂದು ಹರಾಜು ಹಾಕಲಾಗುತ್ತಿದೆ.
ಈ ಕಂಪನಿಯ ಹೆಸರು ಲ್ಯಾಂಕೋ ಅಮರಕಂಟಕ್ ಪವರ್. ಇದು ಥರ್ಮಲ್ ಪವರ್ ಕಂಪನಿಯಾಗಿದ್ದು, ಪ್ರಸ್ತುತ ದಿವಾಳಿಯಾಗಿದೆ. ದೇಶದ ಇಬ್ಬರು ದೊಡ್ಡ ಬಿಲಿಯನೇರ್‌ಗಳು ಈ ಕಂಪನಿಯನ್ನು ಖರೀದಿಸಲು ಕಸರತ್ತು ಮಾಡ್ತಿದ್ದಾರೆ.
ಮುಖೇಶ್ ಅಂಬಾನಿ ಈ ಕಂಪನಿಯನ್ನು ಕೊಂಡುಕೊಂಡರೆ ಅದು ಉಷ್ಣ ವಿದ್ಯುತ್ ಕ್ಷೇತ್ರಕ್ಕೆ ಸೇರುತ್ತದೆ. ಇದನ್ನು ಖರೀದಿಸಲು ಮುಖೇಶ್ ಅಂಬಾನಿ ಒಡೆತನದ ರಿಲಯೆನ್ಸ್ ಅತೀ ಹೆಚ್ಚು ಮೊತ್ತವನ್ನು ಬಿಡ್ ಮಾಡಿದೆ. ರಿಲಯನ್ಸ್ ಮೊದಲ ಸುತ್ತಿನಲ್ಲಿ ಅತಿ ಹೆಚ್ಚು ಬಿಡ್ ಮಾಡಿದ ಕಂಪನಿ ಎನಿಸಿಕೊಂಡಿದೆ.
ಅದಾನಿ ಕೂಡ ಹಿಂದೆ ಬಿದ್ದಿಲ್ಲ. ಎರಡನೇ ಸುತ್ತಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಬಿಡ್ ಮಾಡಿದ್ದಾರೆ. ಆದರೆ ಎರಡೂ ಸುತ್ತುಗಳಲ್ಲಿ ಸರ್ಕಾರಿ ಕಂಪನಿಗಳು ಮೂರನೇ ಸ್ಥಾನದಲ್ಲಿದ್ದವು. ಅದಾನಿ ಎರಡನೇ ಸುತ್ತಿನಲ್ಲಿ 2950 ಕೋಟಿ ರೂಪಾಯಿಗೆ ಬಿಡ್ ಮಾಡಿದ್ದಾರೆ. ಈ ಮೊತ್ತದಲ್ಲಿ 1800 ಕೋಟಿ ಮುಂಗಡ ಪಾವತಿಯಾಗಲಿದೆ. ಇದಲ್ಲದೆ ಮುಂಬರುವ 5 ವರ್ಷಗಳಲ್ಲಿ 1150 ಕೋಟಿ ಬಾಕಿ ಮೊತ್ತವನ್ನು ನೀಡಬೇಕಾಗುತ್ತದೆ.
ರಿಲಯನ್ಸ್ ಮುಂಗಡವಾಗಿ 2000 ಕೋಟಿ ನೀಡಲು ನಿರ್ಧರಿಸಿದೆ. ಪಿಎಫ್‌ಸಿ-ಆರ್‌ಇಸಿಯ ಒಕ್ಕೂಟದಲ್ಲಿ ಸುಮಾರು 3870 ಕೋಟಿ ರೂಪಾಯಿಗಳನ್ನು ಪಾವತಿಸಲಾಗುವುದು. ಇದನ್ನು 10 ರಿಂದ 12 ವರ್ಷಗಳಲ್ಲಿ ಪಾವತಿಸಬೇಕಾಗುತ್ತದೆ. ಜನವರಿಯಲ್ಲಿ ಲ್ಯಾಂಕೊ ಅಮರ್ಕಂಟ್ ಕಂಪನಿಯ ಮಾರಾಟವನ್ನು ಪ್ರಾರಂಭಿಸಲಾಯಿತು. ಇದು ಛತ್ತೀಸ್‌ಗಢದ ಕೊರ್ಬಾ-ಚಂಪಾ ರಾಜ್ಯ ಹೆದ್ದಾರಿಯಲ್ಲಿ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಯೋಜನೆಯನ್ನು ಮುನ್ನಡೆಸುತ್ತಿದೆ.