ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದರೆ ಮುಸ್ಲಿಂ ಸಮುದಾಯದವರಿಗೆ ಮುಖ್ಯಮಂತ್ರಿಯನ್ನಾಗಿ ಮಾಡುವ ಮುಕ್ತ ಅವಕಾಶ ನಮ್ಮ ಪಕ್ಷದಲ್ಲಿದೆ ಎಂದು ಮೋದಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಮಂಗಳವಾರದಂದು ಕೋಲಾರ ತಾಲೂಕಿನ ಕ್ಯಾಲನೂರಿನಲ್ಲಿ ಗ್ರಾಮ ವಾಸ್ತವ್ಯದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಒಂದೊಮ್ಮೆ ಕುಮಾರಸ್ವಾಮಿ ದೆಹಲಿಗೆ ಹೋದರೆ ತಾವು ಮುಖ್ಯಮಂತ್ರಿ ಆಗಬಹುದೆಂಬ ಸಿಎಂ ಇಬ್ರಾಹಿಂ ಹೇಳಿಕೆ ಕುರಿತಂತೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಈ ರೀತಿಯ ಮುಕ್ತ ಚರ್ಚೆ ಅವಕಾಶ ಇರುವುದು ಜೆಡಿಎಸ್ ಪಕ್ಷದಲ್ಲಿ ಮಾತ್ರ ಎಂದು ಪ್ರತಿಪಾದಿಸಿದ ಅವರು, ಮುಸ್ಲಿಮರು ಸಹ ನಮ್ಮವರೇ. ಅವರೂ ಕನ್ನಡಿಗರೇ ಎಂದು ಹೇಳಿದರು. ಅಲ್ಲದೆ ದಲಿತರು ಹಾಗೂ ಮಹಿಳೆಯರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲು ತಮ್ಮ ಪಕ್ಷ ಸಿದ್ಧ ಎಂದು ಇದೇ ಸಂದರ್ಭದಲ್ಲಿ ಕುಮಾರಸ್ವಾಮಿ ಘೋಷಿಸಿದ್ದಾರೆ.