ಮೈಸೂರು: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಶಂಕಿತ ಉಗ್ರ ಶಾರಿಕ್ ತನ್ನ ಮೊಬೈಲ್ ವಾಟ್ಸಾಪ್ ಡಿಪಿಯಲ್ಲಿ ಈಶ್ವರನ ಫೋಟೋ ಹಾಕಿಕೊಂಡಿದ್ದ.
ತನ್ನ ಬಗ್ಗೆ ಯಾರಿಗೂ ಅನುಮಾನ ಬಾರದಿರಲಿ ಎಂಬ ಕಾರಣಕ್ಕೆ ಹಿಂದೂ ವ್ಯಕ್ತಿಯ ಹೆಸರಲ್ಲಿದ್ದ ನಕಲಿ ಆಧಾರ್ ಕಾರ್ಡ್ ನ್ನು ಶಾರಿಕ್ ಬಳಸುತ್ತಿದ್ದ ಅಲ್ಲದೇ ನಕಲಿ ವಿಳಾಸ ಕೊಟ್ಟು ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಅಷ್ಟೇ ಅಲ್ಲ. ಈಗ ಆತ ತನ್ನ ಮೊಬೈಲ್ ವಾಟ್ಸಾಪ್ ಡಿಪಿಯಲ್ಲಿ ಈಶ್ವರ ದೇವರ ಫೋಟೋ ಹಾಕಿಕೊಂಡಿದ್ದ. ಶಂಕಿತ ಉಗ್ರನ ಕೃತ್ಯ ಕಂಡು ಇದೀಗ ರಾಜ್ಯದ ಜನರೇ ಬೆಚ್ಚಿ ಬೀಳುವಂತೆ ಮಾಡಿದೆ.
ಕೆ.ಆರ್.ಮೊಹಲ್ಲಾದಲ್ಲಿರುವ ಎಸ್ ಎಂ ಎಂ ಮೊಬೈಲ್ ರಿಪೇರಿ ತರಬೇತಿ ಕೇಂದ್ರದಲ್ಲಿ ಶಾರಿಕ್ ಮೊಬೈಲ್ ರಿಪೇರಿ ತರಬೇತಿ ಪಡೆಯುತ್ತಿದ್ದ. ತಾನು ಧಾರವಾಡ ಮೂಲದ ಪ್ರೇಮ್ ರಾಜ್ ಎಂದು ದಾಖಲೆ ನೀಡಿದ್ದ. ತನಗೆ ಮೈಸೂರಿನ ಕಾಲ್ ಸೆಂಟರ್ ನಲ್ಲಿ ಉದ್ಯೋಗ ಸಿಕ್ಕಿದ್ದು, ಸೇರಲು 20 ದಿನ ಅವಕಾಶವಿದೆ. ಈ ಸಮಯದಲ್ಲಿ ಮೊಬೈಲ್ ರಿಪೇರಿ ತರಬೇತಿ ಕಲಿಯಬೇಕೆಂದುಕೊಂಡಿದ್ದೇನೆ ಎಂದು ಕೇಂದ್ರ ಸೇರಿದ್ದ.
ಅಲ್ಲದೇ ಧಾರವಾಡ ಶೈಲಿ ಕನ್ನಡದಲ್ಲೇ ಆತ ಮಾತನಾಡುತ್ತಿದ್ದ. ವೇಷ ಭೂಷಣದಲ್ಲಾಗಲಿ, ಬಟ್ಟೆಯಲ್ಲಾಗಲಿ ಯಾವುದರಲ್ಲಿಯೂ ಆತ ಮುಸ್ಲಿಂ ಎಂಬುದೇ ಗೊತ್ತೇ ಆಗುತ್ತಿರಲಿಲ್ಲ. ಈಗ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ರೂವಾರಿ ಆತ ಎಂಬುದು ಕೇಳಿ ಆಘಾತವಾಗಿದೆ ಎಂದು ಮೊಬೈಲ್ ರಿಪೇರಿ ತರಬೇತಿ ಕೇಂದ್ರದ ಮುಖ್ಯಸ್ಥ ಪ್ರಸಾದ್ ತಿಳಿಸಿದ್ದಾರೆ.