ಹುಬ್ಬಳ್ಳಿ ವಿಮಾನ ನಿಲ್ದಾಣ, ಕರ್ನಾಟಕದ ಮೊದಲ ಗ್ರೀನ್ ಏರ್ಪೋರ್ಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರಸ್ತುತ ಇಲ್ಲಿ ಸೋಲಾರ್ ಮೂಲಕ ಎಂಟು ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದ್ದು, ರಾಜ್ಯದ ಆರು ವಿಮಾನ ನಿಲ್ದಾಣಗಳಿಗೂ ಇದನ್ನು ಪೂರೈಕೆ ಮಾಡಲಾಗುತ್ತಿದೆ.
2030 ರ ವೇಳೆಗೆ ಶೇಕಡ 50ರಷ್ಟು ವಿದ್ಯುತ್ತನ್ನು ಮರುಬಳಕೆಯ ಮೂಲಗಳ ಮೂಲಕ ಪಡೆಯಬೇಕೆಂಬ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಗೆ ಪೂರಕವಾಗಿ ಈ ವಿಮಾನ ನಿಲ್ದಾಣದಲ್ಲಿ 2019ರಲ್ಲಿ ಸೋಲಾರ್ ಅಳವಡಿಕೆ ಕಾರ್ಯ ಆರಂಭವಾಗಿದ್ದು, ಇದೀಗ ಶೇಕಡ ನೂರರಷ್ಟು ವಿದ್ಯುತ್ ಸೋಲಾರ್ ಮೂಲಕ ಉತ್ಪಾದನೆಯಾಗುತ್ತಿದೆ. ಹೀಗಾಗಿ ರಾಜ್ಯದ ಮೊದಲ ಗ್ರೀನ್ ಏರ್ಪೋರ್ಟ್ ಎಂಬ ಕೀರ್ತಿ ಹುಬ್ಬಳ್ಳಿ ವಿಮಾನ ನಿಲ್ದಾಣದ ಪಾಲಾಗಿದೆ.
ಇಲ್ಲಿ ಉತ್ಪಾದನೆ ಆಗುವ ವಿದ್ಯುತ್ ನೇರವಾಗಿ ತಾರಿಹಾಳದಲ್ಲಿರುವ ಹುಬ್ಬಳ್ಳಿ ಎಲೆಕ್ಟ್ರಿಸಿಟಿ ಸಪ್ಲೈ ಕಂಪನಿ (ಹೆಸ್ಕಾಂ) ಗೆ ಪೂರೈಕೆಯಾಗುತ್ತಿದ್ದು, ಅಲ್ಲಿಂದ ರಾಜ್ಯದ ಇತರೆ ವಿದ್ಯುತ್ ಕಂಪನಿಗಳ ಮೂಲಕ ಹುಬ್ಬಳ್ಳಿ, ಬೆಳಗಾವಿ, ಮೈಸೂರು, ಬಳ್ಳಾರಿ, ವಿಮಾನ ನಿಲ್ದಾಣ ಹಾಗೂ ಬೆಂಗಳೂರು ಹಾಗೂ ಕಲಬುರ್ಗಿಯಲ್ಲಿರುವ ವಿಮಾನ ನಿಲ್ದಾಣದ ಕ್ವಾಟ್ರಸ್ಗಳಿಗೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣ, ಗ್ರೀನ್ ಏರ್ಪೋರ್ಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಂತಸ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.