ಮಂಡ್ಯ: ಫ್ಲೆಕ್ಸ್ ವಿಚಾರಕ್ಕೆ ನಡೆದ ಜಗಳ ಇದೀಗ ಕೊಲೆಯಲ್ಲಿ ಅಂತ್ಯವಾಗಿದೆ. ಹೌದು, ಆರ್ಕೇಸ್ಟ್ರಾದಲ್ಲಿ ಫ್ಲೆಕ್ಸ್ ಹಾಕಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಜಗಳವಾಗಿದೆ. ಜಗಳ ತಾರಕಕ್ಕೇರಿ ಯುವಕನೊಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ. ಕೊಲೆಯಾದ ಯುವಕನ ಸ್ನೇಹಿತರೇ ಕೊಲೆ ಮಾಡಿದ್ದಾರೆ. ಈ ಘಟನೆ ಮಂಡ್ಯದ ದೊಡ್ಡರಸಿನಕೆರೆ ಗ್ರಾಮದ ಸರ್ಕಲ್ನಲ್ಲಿ ನಡೆದಿದ್ದು, 22 ವರ್ಷದ ಅರುಣ್ ಕೊಲೆಯಾದವ.
ಇದೇ ತಿಂಗಳ 19 ರಂದು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆರ್ಕೇಸ್ಟ್ರಾ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಫ್ಲೆಕ್ಸ್ ಹಾಕಿಸಬೇಕಿತ್ತು. ಅರುಣ್ ಹಾಗೂ ಆತನ ಸ್ನೇಹಿತರು ಈ ಹಿಂದೆ ಶಾಸಕ ಡಿ.ಸಿ. ತಮ್ಮಣ್ಣ ಅವರ ಬೆಂಬಲಿಗರಾಗಿದ್ದರಂತೆ.
ಆದರೆ ಕನ್ನಡ ರಾಜ್ಯೋತ್ಸವದ ಆರ್ಕೇಸ್ಟ್ರಾದಲ್ಲಿ ದೊಡ್ಡರಸಿನಕೆರೆ ಗ್ರಾಮದಲ್ಲಿ ಸಮಾಜ ಸೇವಕ ಕದಲೂರು ಉದಯ್ ಅವರ ಫ್ಲೆಕ್ಸ್ ಮಾತ್ರ ಹಾಕಿದ್ದಾರೆ. ಇದನ್ನು ಅರುಣ್ ಪ್ರಶ್ನೆ ಮಾಡಿದ್ದಾನೆ. ಇಷ್ಟು ದಿನ ನೀವು ತಮ್ಮಣ್ಣ ಜೊತೆಗೆ ಇದ್ದು ಈಗ ಉದಯ್ ಫೋಟೋ ಹಾಕಿಸಿದ್ದೀರಾ ಎಂದು ತನ್ನ ಸ್ನೇಹಿತರಿಗೆ ಕೇಳಿದ್ದಾನೆ.
ಇದೇ ವಿಚಾರವಾಗಿ ಮಾತಿಗೆ ಮಾತು ಬೆಳೆದು ಜಗಳ ದೊಡ್ಡದಾಗಿದೆ. ಈ ವೇಳೆ ಅರುಣ್ನನ್ನು ದೊಡ್ಡರಸಿನಕೆರೆ ಗ್ರಾಮದ ದೊಡ್ಡಯ್ಯ, ದೇವರಾಜು, ಅಭಿ, ಗಜ, ಬೆಳ್ಳಾ ರಾಘುಳಿ ಸೇರಿದಂತೆ 8 ಮಂದಿ ಹೊಡೆದಿದ್ದಾರೆ. ತಕ್ಷಣ ಅಲ್ಲಿದ್ದ ಸ್ಥಳೀಯರು ಗಲಾಟೆ ಬಿಡಿಸಿ ಗಾಯಗೊಂಡ ಅರುಣ್ ನನ್ನು ಕೆ.ಎಂ.ದೊಡ್ಡಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ದೇವರಹಳ್ಳಿ ಬಳಿಕ ಮತ್ತೆ ಅಡ್ಡಗಟ್ಟಿ ಹಲ್ಲೆ ಮಾಡಲಾಗಿದೆ. ಈ ವೇಳೆ ಅರುಣ್ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾನೆ.
ನಂತರ ಅರುಣ್ನನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಕೆಎಂ ದೊಡ್ಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.