ಉತ್ತರಕಾಶಿ: ನೀರಿನ ಕೊರತೆ ನೀಗಿಸುವ ನಿಟ್ಟಿನಲ್ಲಿ ಸಾಮಾಜಿಕ ಕಾರ್ಯಕರ್ತ ಉತ್ತರಕಾಶಿ ಜಿಲ್ಲೆಯ ದ್ವಾರಿಕಾ ಸೆಮ್ವಾಲ್ ಅವರು ‘ಕಲ್ ಕೆ ಲಿಯೇ ಜಲ್’ (ಭವಿಷ್ಯಕ್ಕಾಗಿ ನೀರು) ಎಂಬ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಮಳೆನೀರಿನ ಸಂರಕ್ಷಣೆ ಈ ಅಭಿಯಾನದ ಭಾಗವಾಗಿದೆ.
ಈ ಕುರಿತು 41 ವರ್ಷ ವಯಸ್ಸಿನ ದ್ವಾರಿಕಾ ಅವರು ಮನೆ ಮನೆಗೆ ತೆರಳಿ ಗ್ರಾಮಸ್ಥರಿಗೆ ಅರಿವು ಮೂಡಿಸುತ್ತಿದ್ದಾರೆ. ಭೀಕರ ನೀರಿನ ಬಿಕ್ಕಟ್ಟನ್ನು ಎದುರಿಸುವುದು ಇಂದಿನ ಕರ್ತವ್ಯವಾಗಿದೆ. ಇದರಿಂದಾಗಿ ಕೆರೆಗಳನ್ನು ಕಟ್ಟಿಸಿದರೆ ಭವಿಷ್ಯದಲ್ಲಿ ನೀರಿನ ಸಮಸ್ಯೆ ಆಗುವುದಿಲ್ಲ ಎನ್ನುತ್ತಿರುವ ದ್ವಾರಿಕಾ ಅವರು, ಈ ಕುರಿತು ತಮ್ಮದೇ ಆದ ರೀತಿಯಲ್ಲಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.
“ಈ ಹಿಂದೆ ಕೆಲವರು ನೀರಿಗಾಗಿ ಅಭಿಯಾನಗಳನ್ನು ನಡೆಸಿದ್ದಾರೆ. ಆದರೆ ಅವು ವಿಫಲವಾಗಿವೆ. ನಾನು ಕೂಡ ಈ ಹಿಂದೆ ಮಾಡಿ ಸೋತಿದ್ದೇನೆ. ಆದರೆ ಸೋಲಿನ ಕಾರಣ ತಿಳಿದಿದೆ. ಈ ಹಿನ್ನೆಲೆಯಲ್ಲಿ ಜನರೊಂದಿಗೆ ಸಂಪರ್ಕ ಮಾಡುತ್ತಿದ್ದೇನೆ. ಎಲ್ಲರ ಸಹಕಾರದಿಂದ ಮಾತ್ರ ಇದು ಸಾಧ್ಯ” ಎಂದಿದ್ದಾರೆ.
ಪೂರ್ವಜರ ಸ್ಮರಣಾರ್ಥವಾಗಿಯಾದರೂ ಸರಿ. ಕೆರೆ ನಿರ್ಮಿಸುವಂತೆ ಗ್ರಾಮಸ್ಥರನ್ನು ಕೇಳಿಕೊಳ್ಳುತ್ತಿದ್ದೇನೆ. ಪ್ರೀತಿ ಪಾತ್ರರಾದವರ ಸ್ಮರಣಾರ್ಥವೆಂದು ನಾನು ಕೆರೆ ಕಟ್ಟುವ ಮೂಲಕ ಅಭಿಯಾನ ಶುರು ಮಾಡಿದ್ದೇನೆ. ಈ ಮೂಲಕವಾಗಿ ಭಾವನಾತ್ಮಕವಾಗಿ ಸ್ಪಂದಿಸಲು ಪ್ರಯತ್ನಿಸುತ್ತಿದ್ದೇನೆ. ನನ್ನ ಕೈಲಾದಷ್ಟು ನೆರವಾಗುತ್ತಿದ್ದೇನೆ ಎಂದಿದ್ದು, ಇವರ ಈ ಅಭಿಯಾನಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಬೆಂಬಲ ವ್ಯಕ್ತವಾಗಿದೆ.