ದುಬೈನಲ್ಲಿ ತನ್ನ ವಾಹನವನ್ನು ಕಾರಿಗೆ ಡಿಕ್ಕಿ ಹೊಡೆದು ಅಪಘಾತ ಸ್ಥಳದಿಂದ ಪರಾರಿಯಾಗಿದ್ದ 39 ವರ್ಷದ ಭಾರತೀಯ ವ್ಯಕ್ತಿಗೆ 25,000 ದಿರ್ಹಮ್ (ರೂ. 5,56,672) ದಂಡ ವಿಧಿಸಲಾಗಿದೆ. ಈ ವ್ಯಕ್ತಿ ದುಬೈನಲ್ಲಿ ಚಾಲನೆ ಮಾಡುತ್ತಿದ್ದಾಗ ಕಾರಿನ ನಿಯಂತ್ರಣ ಕಳೆದುಕೊಂಡು ರಸ್ತೆಯ ಬಲಭಾಗದಲ್ಲಿ ನಿಂತಿದ್ದ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ ಎಂದು ವರದಿಯಾಗಿದೆ.
ಆಗಸ್ಟ್ 18 ರಂದು ಈ ಘಟನೆ ನಡೆದಿದ್ದು, ಕಾರಿನ ನಂಬರ್ ಪ್ಲೇಟ್ ಅನ್ನು ಗುರುತಿಸಿದ ನಂತರ ಪೊಲೀಸರು ಕೆಲವೇ ಗಂಟೆಗಳಲ್ಲಿ ಆತನನ್ನು ಬಂಧಿಸಿದರು. ನಂತರ ಬಂಧಿತ ವ್ಯಕ್ತಿ ತಾನು ಮದ್ಯದ ಅಮಲಿನಲ್ಲಿ ತನ್ನ ಕಾರನ್ನು ಚಲಾಯಿಸುತ್ತಿದ್ದೆ ಎಂದು ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದ. ಜಾಮೀನಿನ ಮೇಲೆ ಬಿಡುಗಡೆಯಾಗುವ ಮೊದಲು ಆತ ಎರಡು ದಿನ ಪೊಲೀಸರ ಕಸ್ಟಡಿಯಲ್ಲಿದ್ದ.
ಪ್ರಕರಣದಲ್ಲಿ ದಂಡವಾಗಿ 25,000 ದಿರ್ಹಮ್ ಪಾವತಿಸುವಂತೆ ನ್ಯಾಯಾಧೀಶರು ಆದೇಶಿಸಿದ್ದು, ಪಾಲಿಸದಿದ್ದರೆ ಎಂಟು ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸುವುದಾಗಿ ಹೇಳಿದ್ದಾರೆ. ದುಬೈನ ಟ್ರಾಫಿಕ್ ಕೋರ್ಟ್ನಲ್ಲಿ ವಿಚಾರಣೆಗೆ ಹಾಜರಾಗಲು ವಿಫಲವಾದ ಕಾರಣ ಅವರಿಗೆ ದಂಡ ವಿಧಿಸಲಾಯಿತು. ಯುಎಇಯೊಂದರಲ್ಲೇ, ಸುಮಾರು 14 ಪ್ರತಿಶತದಷ್ಟು ರಸ್ತೆ ಅಪಘಾತಗಳು ಮದ್ಯದ ಅಮಲಿನಲ್ಲಿ ಚಾಲನೆ ಮಾಡುವ ಚಾಲಕರಿಂದ ಉಂಟಾಗುತ್ತವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.