ತಿರುವನಂತಪುರ: ಮುಸ್ಲಿಮರಿಗೆ ವೈಯಕ್ತಿಯ ಕಾನೂನು ಇದ್ದರೂ, ಅದನ್ನೇ ಮುಂದಿಟ್ಟುಕೊಂಡು ಮುಸ್ಲಿಮರ ವಿವಾಹವನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ ಹೊರಗಿಡುವುದು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಮದುವೆಯಾದ ಜೋಡಿಗಳಲ್ಲಿ ಒಬ್ಬರು ಅಪ್ರಾಪ್ತ ವಯಸ್ಸಿನವರಾಗಿದ್ದರೂ ಸಾಕು, ಅಂತಹ ಸಂದರ್ಭದಲ್ಲಿ ಮದುವೆಯ ಸಿಂಧುತ್ವ ಅಥವಾ ಇತರ ವಿಚಾರಗಳನ್ನು ಲೆಕ್ಕಿಸದೆ, ಪೋಕ್ಸೊ ಕಾಯ್ದೆಯಡಿ ಅಪರಾಧ ಎಂದು ಪರಿಗಣಿಸಲಾಗುತ್ತದೆ ಮತ್ತು ಈ ಕಾನೂನು ಅನ್ವಯವಾಗುತ್ತದೆ ಎಂದು ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ತೀರ್ಪಿತ್ತಿದ್ದಾರೆ.
“ಪೋಕ್ಸೊ ಕಾಯ್ದೆಯು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆಗಾಗಿ ವಿಶೇಷವಾಗಿ ಜಾರಿಗೊಳಿಸಲಾದ ಕಾಯ್ದೆ. ಆದ್ದರಿಂದ ಧರ್ಮ ಯಾವುದೇ ಇದ್ದರೂ ಮಗುವಿನ ವಿರುದ್ಧ ಲೈಂಗಿಕ ಶೋಷಣೆಯು ಅಪರಾಧವೇ. ಅದರಿಂದ ಮದುವೆಯನ್ನು ಹೊರಗಿಡಲಾಗುವುದಿಲ್ಲ ಎಂದು ನ್ಯಾಯಮೂರ್ತಿಗಳು ಸ್ಪಷ್ಟಪಡಿಸಿದ್ದಾರೆ.
“ಬಾಲ್ಯವಿವಾಹವು ಮಗುವಿನ ಬೆಳವಣಿಗೆಯನ್ನು ತಡೆಯುವುದಲ್ಲದೆ, ಮಗುವಿನ ಪೂರ್ಣ ಸಾಮರ್ಥ್ಯವನ್ನು ಪಡೆಯಲಾಗದಂತೆ ಮಾಡುತ್ತದೆ. ಇದು ಸಮಾಜಕ್ಕೆ ಅಂಟಿದ ಶಾಪ. ಪೋಕ್ಸೋ ಕಾಯ್ದೆಯ ಮೂಲಕ ಪ್ರತಿಬಿಂಬಿಸುವ ಶಾಸಕಾಂಗ ಉದ್ದೇಶವು ಮದುವೆಯ ನೆಪದಲ್ಲಿ ಮಗುವಿನೊಂದಿಗೆ ದೈಹಿಕ ಸಂಬಂಧಗಳನ್ನು ನಿಷೇಧಿಸುವುದಾಗಿದೆ. ಇದು ಈ ಕಾಯ್ದೆಯ ಮತ್ತು ಸಮಾಜದ ಉದ್ದೇಶವೂ ಆಗಿದೆ” ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.