ಬೆಂಗಳೂರು: ಮತದಾರರ ಪಟ್ಟಿ ಪರಿಷ್ಕರಣೆ ಹೆಸರಲ್ಲಿ ಬೆಂಗಳೂರಿನಲ್ಲಿ ಚಿಲುಮೆ ಸಂಸ್ಥೆ ನಡೆಸಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ಚಿಲುಮೆ ಸಂಸ್ಥೆ ಮುಖ್ಯಸ್ಥರಾದ ರವಿಕುಮಾರ್, ಕೆಂಪೇಗೌಡ, ರೇಣುಕಾಪ್ರಸಾದ್, ಹೆಚ್.ಆರ್.ಧರ್ಮೇಶ್ ಹಾಗೂ ಪ್ರಜ್ವಲ್ ಬಂಧಿತ ಆರೋಪಿಗಳು. ಅಕ್ರಮದ ಬಗ್ಗೆ ತನಿಖೆ ಚುರುಕುಗೊಳಿಸುತ್ತಿದಂತೆ ಹುಬ್ಬಳ್ಳಿ, ದಾವಣಗೆರೆ, ಕನಕಗಿರಿಯಲ್ಲಿಯೂ ವೋಟರ್ ಐಡಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ.
ಬೆಂಗಳೂರು ಮೂಲದ ಐಐಎಂಟಿ ಸಂಸ್ಥೆ ಧಾರವಾಡ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ 6 ತಿಂಗಳ ಹಿಂದೆಯೇ ಮತದಾರರ ಮಾಹಿತಿ ಸಂಗ್ರಹಿಸಿ ಸ್ಮಾರ್ಟ್ ಸಿಟಿ ವಿಭಾಗದ ಹೆಸರಲ್ಲಿ ಅಕ್ರಮ ನಡೆಸಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಕನಕಗಿರಿ ಕ್ಷೇತ್ರದಲ್ಲಿ ಸುಮಾರು 9 ಸಾವಿರ ಮತದಾರರ ಸಂಖ್ಯೆ ಕಡಿಮೆಯಾಗಿದ್ದು ಬಿಜೆಪಿ ಸೋಲಿನ ಭೀತಿಯಲ್ಲಿ ಈ ರೀತಿ ಮಾಡುತ್ತಿದೆ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ದೂರಿದ್ದಾರೆ. ಇನ್ನು ದಾವಣಗೆರೆಯಲ್ಲಿ ಮತದಾರರ ಪಟ್ಟಿಯಿಂದ 1718 ಜನರ ಹೆಸರೇ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಫಾರ್ಮ್ ನಂ.7 ಭರ್ತಿ ಮಾಡದೇ ಮತದಾರರ ಪಟ್ಟಿಯಿಂದಲೇ ಹೆಸರನ್ನು ಕೈಬಿಡಲಾಗಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.