ಕೆಲ ಪಿಎಫ್ ಖಾತೆದಾರರು ತಮ್ಮ ಖಾತೆಗೆ ಬಡ್ಡಿ ಜಮೆ ಆಗಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಲು ಪದೇ ಪದೇ ಬ್ಯಾಲೆನ್ಸ್ ಚೆಕ್ ಮಾಡುತ್ತಿರುತ್ತಾರೆ. ಹೀಗೆ ಬ್ಯಾಲೆನ್ಸ್ ಚೆಕ್ ಮಾಡಲು ಹೋದ ವ್ಯಕ್ತಿಯೊಬ್ಬರು ವಂಚಕನ ಜಾಲಕ್ಕೆ ಸಿಲುಕಿ ಕೆಲವೇ ನಿಮಿಷಗಳಲ್ಲಿ ಬರೋಬ್ಬರಿ 1.23 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಈ ಘಟನೆ ವಾಣಿಜ್ಯ ನಗರಿ ಮುಂಬೈನಲ್ಲಿ ನಡೆದಿದೆ.
ಅಂಧೇರಿ ನಿವಾಸಿಯಾದ ಈ ವ್ಯಕ್ತಿ ಲೋಯರ್ ಪರೇಲ್ ನಲ್ಲಿರುವ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದು, ನವೆಂಬರ್ 7ರಂದು 12:30 ರ ಸುಮಾರಿಗೆ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡುವ ಸಲುವಾಗಿ ತಮ್ಮ ಮೊಬೈಲ್ ನಲ್ಲಿ ಪಿಎಫ್ ವೆಬ್ಸೈಟ್ ತೆರೆಯಲು ಯತ್ನಿಸಿದ್ದಾರೆ.
ಆದರೆ ವೆಬ್ಸೈಟ್ ಓಪನ್ ಆಗದ ಕಾರಣ ತಮ್ಮ ಮೊಬೈಲ್ ನಲ್ಲಿಯೇ ಹೆಲ್ಪ್ ಲೈನ್ ನಂಬರ್ ಹುಡುಕಿದ್ದು, ಅದರಲ್ಲಿದ್ದ ನಕಲಿ ನಂಬರ್ ಗೆ ಕರೆ ಮಾಡಿದ್ದಾರೆ. ಈ ಕರೆಯನ್ನು ಸ್ವೀಕರಿಸಿದ ವಂಚಕ ಆಪ್ ಅನ್ನು ಡೌನ್ಲೋಡ್ ಮಾಡಿಸಿದ್ದು, ಓಟಿಪಿಯನ್ನು ಸಹ ಪಡೆದುಕೊಂಡಿದ್ದಾನೆ.
ಬಳಿಕ ಅವರೊಂದಿಗೆ ಮಾತನಾಡುತ್ತಲೇ ಸುಮಾರು 14 ಖಾತೆಗಳಿಗೆ 1.23 ಲಕ್ಷ ರೂಪಾಯಿಯನ್ನು ವರ್ಗಾಯಿಸಿಕೊಂಡಿದ್ದಾನೆ. ಜೊತೆಗೆ ಕ್ರೆಡಿಟ್ ಕಾರ್ಡ್ ವಿವರಗಳನ್ನೂ ಕೇಳಿದಾಗ ಈ ವ್ಯಕ್ತಿಗೆ ಅನುಮಾನ ಬಂದಿದೆ. ನಂತರ ವಂಚನೆಗೊಳಗಾಗಿರುವುದು ಖಚಿತವಾಗಿದ್ದು ಇದೀಗ ಎನ್ ಎಂ ಜೋಶಿ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.