ತುಮಕೂರು: ಮಂಗಳೂರಿನಲ್ಲಿ ಆಟೋ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಮಹತ್ತರ ಬೆಳವಣಿಗೆ ನಡೆದಿದ್ದು, ಶಂಕಿತನ ಬಳಿ ಇದ್ದ ನಕಲಿ ಆಧಾರ್ ಕಾರ್ಡ್ ನ ಅಸಲಿ ವ್ಯಕ್ತಿಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಮಂಗಳೂರಿನ ನಾಗರಿ ಬಳಿ ಆಟೋದಲ್ಲಿ ಕುಕ್ಕರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತನ ಬಳಿ ಪತ್ತೆಯಾಗಿದ್ದ ಪ್ರೇಮ್ ರಾಜ್ ಹೆಸರಿನ ಆಧಾರ್ ಕಾರ್ಡ್ ನ ಅಸಲಿ ವ್ಯಕ್ತಿ ಪ್ರೇಮ್ ರಾಜ್ ತುಮಕೂರಿನಲ್ಲಿ ಪತ್ತೆಯಾಗಿದ್ದಾರೆ.
ತುಮಕೂರಿನಲ್ಲಿ ರೈಲ್ವೆ ಟ್ರ್ಯಾಕ್ ಮೈನ್ ಟೈನರ್ ಆಗಿ ಕೆಲಸ ಮಾಡುತ್ತಿದ್ದ ಪ್ರೇಮ್ ರಾಜ್ ಹುಬ್ಬಳ್ಳಿ ಮೂಲದವರಾಗಿದ್ದು, ತುಮಕೂರಿನ ಹಿರೇಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಪ್ರೇಮ್ ರಾಜ್ ಎರಡು ಬಾರಿ ಆಧಾರ್ ಕಾರ್ಡ್ ಕಳೆದುಕೊಂಡಿದ್ದರಂತೆ.
ವರ್ಷದ ಹಿಂದೆ ಧಾರವಾಡದಿಂದ ಬೆಳಗಾವಿಗೆ ಬಸ್ ನಲ್ಲಿ ಹೋಗುತ್ತಿದ್ದ ವೇಳೆ ಆಧಾರ್ ಕಾರ್ಡ್ ಕಾಣೆಯಾಗಿತ್ತಂತೆ ಹೀಗಾಗಿ ಮತ್ತೊಂದು ಆಧಾರ್ ಕಾರ್ಡ್ ಮಾಡಿಸಿದ್ದರಂತೆ ಅದು ಕೂಡ 6 ತಿಂಗಳ ಹಿಂದೆ ಹುಬ್ಬಳ್ಳಿಯಿಂದ ತುಮಕೂರಿಗೆ ಬಸ್ ನಲ್ಲಿ ಬರುವಾಗ ಕಳೆದು ಹೋಗಿತ್ತಂತೆ. ಹೀಗಾಗಿ ಮತ್ತೆ ಆಧಾರ್ ಕಾರ್ಡ್ ಮಾಡಿಸಿದ್ದರಂತೆ. ಕಾಣೆಯಾಗಿದ್ದ ಆಧಾರ್ ಕಾರ್ಡ್ ಇದೀಗ ಶಂಕಿತ ಉಗ್ರನೊಬ್ಬ ದುರ್ಬಳಕೆ ಮಾಡಿಕೊಂಡಿರುವುದು ಆಘಾತ ತಂದಿದೆ ಎಂದು ಪ್ರೇಮ್ ರಾಜ್ ತಿಳಿಸಿದ್ದಾರೆ.
ಆಟೋ ಸ್ಫೋಟ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಅಧಿಕಾರಿಗಳಿಗೆ ಸಿಕ್ಕ ಆಧಾರ್ ಕಾರ್ಡ್ ನಲ್ಲಿ ನನ್ನ ಹೆಸರು ವಿಳಾಸವಿದೆ. ಆದರೆ ಫೋಟೊ ನನ್ನದಲ್ಲ. ನಿನೆಯೇ ಮಂಗಳೂರು ಎಸ್ ಪಿ ಕರೆ ಮಾಡಿ ತುಮಕೂರು ಎಸ್ ಭೇಟಿಯಾಗಲು ತಿಳಿಸಿದ್ದರು. ಅದರಂತೆ ಭೇಟಿಯಾಗಿದ್ದು, ಈ ವೇಳೆ ಘಟನೆ ಬಗ್ಗೆ ನನ್ನ ಆಧಾರ್ ಕಾರ್ಡ್ ಈ ರೀತಿ ದುರ್ಬಳಕೆಯಾದ ಬಗ್ಗೆ ಗೊತ್ತಾಗಿದೆ ಎಂದು ತಿಳಿಸಿದ್ದಾರೆ.