ಸುಮಾರು 140 ವರ್ಷಗಳ ಹಿಂದೆ ಪಪುವಾ ನ್ಯೂಗಿನಿಯಾದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡ ಅಪರೂಪದ ಪಕ್ಷಿಯಾದ ಕಪ್ಪು ಪಾರಿವಾಳವನ್ನು (black-naped pheasant pigeon) ವಿಜ್ಞಾನಿಗಳು ಮರುಶೋಧಿಸಿದ್ದಾರೆ. ಪಪುವಾ ನ್ಯೂಗಿನಿಯಾದ ಅರಣ್ಯದಲ್ಲಿ ಈ ಪಕ್ಷಿಯನ್ನು ಸಂಶೋಧನಾ ತಂಡವು ಸೆರೆಹಿಡಿದಿದೆ.
ಸುಮಾರು 20 ಪ್ರಭೇದದ ಹಕ್ಕಿಗಳು ಈಚೆಗೆ ಕಳೆದುಹೋಗಿದ್ದು, ಕಪ್ಪು ಪಾರಿವಾಳ ಅವುಗಳಲ್ಲಿ ಒಂದು. ಒಂದು ಶತಮಾನಕ್ಕೂ ಹೆಚ್ಚು ಕಾಲ ಎಲ್ಲಿಯೂ ಕಂಡಿರದ ಈ ಹಕ್ಕಿಯನ್ನು 1882 ರಲ್ಲಿ ಮೊದಲ ಬಾರಿಗೆ ಕಂಡುಹಿಡಿಯಲಾಗಿತ್ತು. ನಂತರ ಅದು ಕಾಣೆಯಾಗಿ ಹೋಗಿತ್ತು. ಇದೀಗ ಆ ಸಂತತಿಯ ಪಾರಿವಾಳ ಸಿಕ್ಕಿರುವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.
ಸಂಶೋಧನಾ ತಂಡವು ಒಂದು ತಿಂಗಳ ಕಾಲ ಶ್ರಮಿಸಿದ್ದರ ಫಲವಾಗಿ ಇದು ಸಿಕ್ಕಿದೆ ಎಂದು ಬಿಬಿಸಿ ವರದಿ ಮಾಡಿದೆ. ಇದನ್ನು ಕಂಡುಹಿಡಿಯಲು ತಾವು ಪಟ್ಟಿರುವ ಶ್ರಮದ ಕುರಿತು ಸಂಶೋಧನಾ ತಂಡದ ನಿರ್ದೇಶಕ ಜಾನ್ ಸಿ ಮಿಟರ್‌ಮಿಯರ್ ವಿವರಿಸಿದ್ದಾರೆ. “ಯಾವುದೇ ಪಕ್ಷಿ-ಪ್ರಾಣಿ ಸೇರಿದಂತೆ ಯಾವುದೇ ಸಂತತಿ ಹಲವು ವರ್ಷ ಸಿಗದಿದ್ದಾಗ ಅದು ಅಳಿವಿನ ಅಂಚಿಗೆ ಹೋಗಿದೆ ಎಂದೇ ಭಾವಿಸಲಾಗುತ್ತದೆ. ಆದರೆ ಸೂಕ್ಷ್ಮವಾಗಿ ಹುಡುಕಿದಾಗ ಅವುಗಳು ಸಿಗುತ್ತವೆ” ಎಂದು ಜಾನ್ ಸಿ ಮಿಟರ್‌ಮಿಯರ್ ಹೇಳುತ್ತಾರೆ.