ಒಂಬತ್ತು ವರ್ಷಗಳಷ್ಟು ಹಳೆಯದಾದ ರ್ಯಾಶ್ ಡ್ರೈವಿಂಗ್ ಪ್ರಕರಣದಲ್ಲಿ ಮುಂಬೈ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಆಟೋ ಚಾಲಕ ಸಿಕಂದರ್ ಶೇಖ್ ಅವರನ್ನು ಖುಲಾಸೆಗೊಳಿಸಿದೆ. 10 ಅಡಿ ದೂರದಲ್ಲಿ ಗುರುತು ಹಾಕದ ಸ್ಪೀಡ್ ಬ್ರೇಕರ್ ಅನ್ನು ಗಮನಿಸಿ ಅಪಘಾತವನ್ನು ತಪ್ಪಿಸಲು ಚಾಲಕ ಬ್ರೇಕ್ ಹಾಕಿದ್ದಾರೆ ಎಂದು ಕೋರ್ಟ್ ಗಮನಿಸಿದೆ.
ಸ್ಪೀಡ್ ಬ್ರೇಕರ್ ಗುರುತು ಹಾಕಿದ್ದರೆ ಅವರು ದಿಢೀರ್ ಬ್ರೇಕ್ ಹಾಕಬೇಕಿರಲಿಲ್ಲ ಎಂದು ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.
ಆಟೋ ಸ್ಕಿಡ್ ಆಗಿ ಬದಿಯಲ್ಲಿ ಬಿದ್ದಿದ್ದರಿಂದ ಅದರಲ್ಲಿ ಪ್ರಯಾಣಿಸುತ್ತಿದ್ದ ತಾಯಿ ಮತ್ತು ಮಗನಿಗೆ ಗಂಭೀರ ಗಾಯಗಳಾಗಿತ್ತು. ಗಾಯಗೊಂಡಿದ್ದವರು ಚಾಲಕನ ವಿರುದ್ಧ ರ್ಯಾಶ್ ಡ್ರೈವಿಂಗ್ ಕೇಸ್ ದಾಖಲಿಸಿದ್ದರು.
ನವೆಂಬರ್ 25, 2012 ರಂದು ಕಾಂದಿವಲಿಯಲ್ಲಿ ಈ ಘಟನೆ ಸಂಭವಿಸಿದೆ. ದೂರುದಾರರಾದ ನಾನಾ ಭಾಗವತ್ ಅವರು ತಮ್ಮ ಪತ್ನಿ ನಿಕಿತಾ, ಮಗ ವೈಭವ್, ಅತ್ತಿಗೆ ಮತ್ತು ಸೊಸೆಯೊಂದಿಗೆ ಆಟೋದಲ್ಲಿ ಪ್ರಯಾಣಿಸುತ್ತಿದ್ದರು.
ಭಾಗವತ್ ಅವರು ಸೆಕ್ಷನ್ 279 (ಅಪವೇಗದ ಚಾಲನೆ), ಸೆಕ್ಷನ್ 338 (ಅಪಘಾತ ಅಥವಾ ನಿರ್ಲಕ್ಷ್ಯದ ಕೃತ್ಯ) ಮತ್ತು ಮೋಟಾರು ವಾಹನ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ದೂರು ದಾಖಲಿಸಿದ್ದರು.
ವಿಚಾರಣೆ ವೇಳೆ ಕುಟುಂಬಸ್ಥರು ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದರು. ಆದಾಗ್ಯೂ ಗುರುತು ಹಾಕದ ಸ್ಪೀಡ್ ಬ್ರೇಕರ್ ಬಗ್ಗೆ ತನಿಖಾಧಿಕಾರಿಯ ಕ್ರಾಸ್ ಎಕ್ಸಾಮಿನೇಷನ್ ಸಮಯದಲ್ಲಿ ಬಯಲಾದ ಅಂಶವನ್ನು ನ್ಯಾಯಾಲಯ ಪರಿಗಣಿಸಿದೆ. ಆರೋಪಿಯು ಅಪಘಾತವನ್ನು ತಪ್ಪಿಸಲು ಬಯಸಿದ್ದನ್ನು ಇದು ಸಾಬೀತುಪಡಿಸುತ್ತದೆ ಎಂದು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅಮಿತ್ ಕೊಕಾಟೆ ಹೇಳಿದರು.