ಶಿವಮೊಗ್ಗ: ಸರ್ಕಾರಿ ನೌಕರರ ಏಳನೇ ವೇತನ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಮಾರ್ಚ್ ಅಂತ್ಯದೊಳಗೆ ಅನುಷ್ಠಾನಗೊಳಿಸುವ ವಿಶ್ವಾಸವಿದೆ ಎಂದು ರಾಜ್ಯ ಸರ್ಕಾರ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಏಳನೇ ವೇತನ ಆಯೋಗ ಘೋಷಿಸಿ, ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ ರಾವ್ ಅಧ್ಯಕ್ಷತೆಯಲ್ಲಿ ಆಯೋಗ ರಚಿಸಿ ಶನಿವಾರ ಆದೇಶ ಹೊರಡಿಸಲಾಗಿದೆ ಎಂದರು.
ವೇತನ ಆಯೋಗ ಘೋಷಣೆಯಾದ ನಂತರ ಸಮಿತಿ ರಚನೆ ಆದೇಶಕ್ಕೆ ತಿಂಗಳುಗಟ್ಟಲೇ ಸಮಯ ಹಿಡಿಯುತ್ತಿತ್ತು. ಈ ಬಾರಿ ಮುಖ್ಯಮಂತ್ರಿಗಳು ಕೇವಲ ಒಂದೇ ವಾರದಲ್ಲಿ ಆಯೋಗ ರಚಿಸಿ ಆದೇಶ ಹೊರಡಿಸಿದ್ದು, ವರದಿ ಸಲ್ಲಿಸಲು ಆರು ತಿಂಗಳ ಗಡುವು ನೀಡಲಾಗಿದೆ ಎಂದರು.
ಸಮಿತಿಗೆ ವೇತನ ಮತ್ತು ಭತ್ಯೆ ಹೊರತುಪಡಿಸಿ ಬೇರೆ ಯಾವುದೇ ಜವಾಬ್ದಾರಿಗಳನ್ನು ನೀಡದ ಕಾರಣ ಆಯೋಗ ಕಡಿಮೆ ಅವಧಿಯಲ್ಲಿ ವರದಿ ಸಲ್ಲಿಸಲು ಅವಕಾಶವಿದೆ. ಆಯೋಗಕ್ಕೆ ಕಚೇರಿಯನ್ನು ಗುರುತಿಸಿದ್ದು, ಮುಂದಿನ ವಾರದೊಳಗೆ ಕಚೇರಿ ಕೆಲಸ ಆರಂಭಿಸಬಹುದು. ಇದಕ್ಕೆ ಪೂರಕವಾಗಿ ಆಯೋಗಕ್ಕೆ ವಿವಿಧ ಕೇಡರ್ ಗಳ ವೇತನ ಮತ್ತು ಭತ್ಯೆಗೆ ಸಂಬಂಧಿಸಿದಂತೆ ಮಾಹಿತಿ ಸಲ್ಲಿಸಲಾಗಿದ್ದು, ಆಯೋಗ ಭೇಟಿ ಮಾಡಿ ಗೊಂದಲಗಳು ಇದ್ದರೆ ಪರಿಹರಿಸಲಾಗುವುದು ಎಂದರು.
ಫೆಬ್ರವರಿ ಅಂತ್ಯದೊಳಗೆ ವರದಿ ಸಲ್ಲಿಕೆಯಾಗಿ ನಂತರದ ಒಂದು ತಿಂಗಳಲ್ಲಿ ಆಯೋಗದ ವರದಿಯನ್ನು ಸರ್ಕಾರ ಅನುಷ್ಠಾನಗೊಳಿಸುವ ವಿಶ್ವಾಸವಿದೆ. ನೌಕರರಿಗೆ ಶೇಕಡ 40ರಷ್ಟು ಫಿಟ್ ಮೆಂಟ್ ಲಾಭ ಸಿಗುವ ಸಾಧ್ಯತೆ ಇದ್ದು, 5.20 ಲಕ್ಷ ನೌಕರರಿಗೆ ಅನುಕೂಲವಾಗಲಿದೆ. ಇದರಿಂದ ಸರ್ಕಾರಕ್ಕೆ ವಾರ್ಷಿಕ 12,500 ಕೋಟಿ ರೂ. ಹೆಚ್ಚುವರಿ ಹೊರೆ ಆಗಲಿದೆ ಎಂದರು.
ಹಿಂದೆ ವೇತನ ಆಯೋಗ ಜಾರಿಗೆ ಹೋರಾಟ, ಪ್ರತಿಭಟನೆ ನಡೆದ ಉದಾಹರಣೆಗಳಿವೆ. ಆದರೆ, ಈ ಬಾರಿ ಮುಖ್ಯಮಂತ್ರಿಗಳು ಅದಕ್ಕೆ ಅವಕಾಶ ನೀಡಿಲ್ಲ ಎಂದ ಅವರು, ಎನ್‌ಪಿಎಸ್ ವಿಷಯವನ್ನು ಕೂಡ ಗಂಭೀರವಾಗಿ ಪರಿಗಣಿಸಿದ್ದು, ಎನ್.ಪಿ.ಎಸ್. ರದ್ದುಗೊಳಿಸಿ ಹಳೇ ಪಿಂಚಣಿ ವ್ಯವಸ್ಥೆ ಮುಂದುವರೆಸಲು ಹೋರಾಟ ನಡೆಸಲಾಗುವುದು ಎಂದು ಹೇಳಿದ್ದಾರೆ.