ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬಿಜೆಪಿ ಕಾರ್ಯಕ್ರಮಗಳಿಂದ ದೂರವುಳಿದಿದ್ದು, ಪಕ್ಷ ತೊರೆದು ಜೆಡಿಎಸ್ ಗೆ ಸೇರ್ಪಡೆಯಾಗಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಈ ಬಗ್ಗೆ ಇದೀಗ ಸ್ವತಃ ರಮೇಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ.
ಬೆಳಗಾವಿ ಜಿಲ್ಲೆ ಬೆಳಗುಂದಿ ಗ್ರಾಮದಲ್ಲಿ ಆಪ್ತರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ, ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಜೊತೆ ನಾನು ಮಾತನಾಡಿದ್ದು ನಿಜ. ಆದರೆ ಜೆಡಿಎಸ್ ಸೇರುವ ಯೋಚನೆಯಿಲ್ಲ ಎಂದು ತಿಳಿಸಿದರು.
ನನ್ನ ಮನಸ್ಸಿಗೆ ಬೇಜಾರಾಗಿ ಕಳೆದ ಒಂದು ವರ್ಷದಿಂದ ಪಕ್ಷದ ಚಟುವಟಿಕೆಯಿಂದ ದೂರವುಳಿದಿದ್ದೆ. ಹಾಗಂತ ಬಿಜೆಪಿ ತೊರೆಯುವುವ ಉದ್ದೇಶವಿಲ್ಲ. ನಿತ್ಯವೂ ಕುಮಾರಸ್ವಾಮಿ ನನ್ನ ಜೊತೆ ಫೋನ್ ನಲ್ಲಿ ಮಾತನಾಡುತ್ತಿರುತ್ತಾರೆ. ನಿನ್ನ ಉದ್ದೇಶ ನೀನು ಮಾಡು, ನನ್ನ ಉದ್ದೇಶ ನಾನು ಮಾಡುತ್ತೇನೆ. ನಮ್ಮಿಬ್ಬರ ಉದ್ದೇಶ ಒಂದೇ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬಾರದು ಎಂದು ಹೇಳಿದ್ದಾರೆ ಎಂದರು. ಈ ಮೂಲಕ ರಮೇಶ್ ಜಾರಕಿಹೊಳಿ ಜೆಡಿಎಸ್ ಸೇರಲಿದ್ದಾರೆ ಎಂಬ ಚರ್ಚೆಗೆ ತೆರೆ ಎಳೆದಿದ್ದಾರೆ.