ಬೆಂಗಳೂರು: ಬೆಂಗಳೂರು-ಮೈಸೂರು ಹೆದ್ದಾರಿ ದುರಸ್ತಿ ಮಾಡಿಸುವಂತೆ ಶಾಸಕ ಸಿ.ಎಸ್.ಪುಟ್ಟರಾಜು ಸಂಸದ ಪ್ರತಾಪ್ ಸಿಂಹ ಅವರಿಗೆ ಗಡುವು ನೀಡಿದ್ದಾರೆ.
ಭಾರಿ ವಾಹನಗಳ ಸಂಚಾರದಿಂದಾಗಿ ಮೇಲುಕೋಟೆಯ ಬಹುತೇಕ ರಸ್ತೆಗಳು ಹೊಂಡಗಳಾಗಿವೆ. ವಾಹನ ಸಂಚಾರಕ್ಕೆ ಸಂಕಷ್ಟ ಎದುರಾಗಿದೆ. ಸಂಸದರು ಹೆದ್ದಾರಿ ದುರಸ್ತಿ ಬಳಿಕ ರಸ್ತೆ ದುರಸ್ತಿ ಮಾಡಿಕೊಡುವುದಾಗಿ ಮಾತುಕೊಟ್ಟಿದ್ದರು. ಸಧ್ಯ ಬೆಂಗಳೂರು-ಮೈಸೂರು ರಸ್ತೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಅದು ಅವೈಜ್ಞಾನಿಕ ಕಾಮಗಾರಿ ನಡೆದಿದ್ದು, ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ. ಮೇಲುಕೋಟೆ ವ್ಯಾಪ್ತಿಯಲ್ಲಿ ಬರುವ ಬಹುತೇಕ ರಸ್ತೆಗಳು ಹಾಳಾಗಿವೆ. ಮೊದಲು ದುರಸ್ತಿ ಮಾಡಿಕೊಡಲಿ ಎಂದು ಶಾಸಕರು ಆಗ್ರಹಿಸಿದ್ದಾರೆ.
ಪ್ರತಾಪ್ ಸಿಂಹ ಅವರ ಕಾಂಟ್ರ್ಯಾಕ್ಟರ್ ಮೇಲೆ ಮತ್ತೊಬ್ಬ ಕಾಂಟ್ರ್ಯಾಕ್ಟರ್ ರೀತಿ ಕಾಮಗಾರಿ ನಡೆಸಿದ್ದಾರೆ. ಹೆದ್ದಾರಿ ಕಾಮಗಾರಿ ಸಾವಿರಾರು ಜನರ ಅನ್ನ ಕಿತ್ತುಕೊಂಡಿದೆ. ರಸ್ತೆ ಗಮನಿಸಿದರೆ ಕಳಪೆ ಕಾಮಗಾರಿ ಎಂಬುದು ಬಟಾಬಯಲಾಗುತ್ತದೆ. ಹೆದ್ದಾರಿ ಬಳಿಯ ಹಲವು ರಸ್ತೆಗಳು ಹಾಳಾಗಿವೆ. ತಕ್ಷಣ ರಸ್ತೆ ದುರಸ್ತಿ ಮಾಡಬೇಕು. ಮಾತು ತಪ್ಪಿದರೆ ಸಂಸದರ ಮನೆ ಮುಂದೆ ಧರಣಿ ನಡೆಸುತ್ತೇವೆ ಎಂದು ಎಚ್ಚರಿಸಿದ್ದಾರೆ.