ಕಳೆದ ಮೂರು ವರ್ಷಗಳಿಂದ ವಿಶ್ವದ ಜನತೆಯನ್ನು ಇನ್ನಿಲ್ಲದಂತೆ ಕಾಡಿದ್ದ ಕೊರೊನಾ ಮಹಾಮಾರಿ ಕುರಿತು ಕೊನೆಗೂ ನೆಮ್ಮದಿಯ ಸುದ್ದಿ ಸಿಕ್ಕಿದೆ. ಕಳೆದ ಒಂದು ವರ್ಷದಿಂದ ಕೋವಿಡ್ ನ ಯಾವುದೇ ಹೊಸ ರೂಪಾಂತರಿ ಪತ್ತೆಯಾಗಿಲ್ಲವಾದ ಕಾರಣ ಇದು ಬಹುತೇಕ ಅಂತ್ಯವಾದಂತಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮಾಜಿ ವಿಜ್ಞಾನಿ ಡಾ. ರಮಣ್ ಗಂಗಾಖೇಡ್ಕರ್ ಹೇಳಿದ್ದಾರೆ.
ಕೋವಿಡ್ ನ ಒಮಿಕ್ರಾನ್ ರೂಪಾಂತರಿ ಒಂದು ವರ್ಷದ ಹಿಂದೆ ಪತ್ತೆಯಾಗಿದ್ದು, ಇದೇ ಈಗಲೂ ಸಹ ಮುಂದುವರೆದಿದೆ. ಇದು ಸೌಮ್ಯ ತಳಿಯಾಗಿರುವ ಕಾರಣ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಹಾಗೂ ಮೃತಪಟ್ಟವರ ಸಂಖ್ಯೆ ಗಣನೀಯವಾಗಿ ತಗ್ಗಿದೆ ಎಂದು ಹೇಳಿರುವ ಅವರು, ಕೋವಿಡ್ ಮರುಕಳಿಸುವ ಸಾಧ್ಯತೆ ಕ್ಷೀಣವಾಗಿದೆ ಎಂದು ತಿಳಿಸಿದ್ದಾರೆ.
ಮೂರು ವರ್ಷಗಳ ಹಿಂದೆ ಮೊಟ್ಟಮೊದಲ ಬಾರಿಗೆ ಚೀನಾದ ವುಹಾನ್ ನಗರದಲ್ಲಿ ಕಾಣಿಸಿಕೊಂಡ ಕೊರೊನಾ ವಿಶ್ವದ ಕೋಟ್ಯಾಂತರ ಮಂದಿಯನ್ನು ಬಲಿ ಪಡೆದಿದ್ದು, ಭಾರತದಲ್ಲಿಯೂ ಸಹ ಲಕ್ಷಾಂತರ ಮಂದಿ ಇದರಿಂದ ಸಾವನ್ನಪ್ಪಿದ್ದಾರೆ. ಇದೀಗ ಸೋಂಕಿತರ ಸಂಖ್ಯೆ ಗಣನೀಯವಾಗಿ ತಗ್ಗಿರುವ ಕಾರಣ ಕೊರೊನಾ ಮಾರ್ಗಸೂಚಿಯಲ್ಲೂ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ.