ಹಳೆಯ ಪಿಂಚಣಿ ಯೋಜನೆ ಜಾರಿಗೆ ಪಂಜಾಬ್ ಸರ್ಕಾರ ಅನುಮೋದನೆ ನೀಡಿದೆ. ಹಳೆಯ ಪಿಂಚಣಿ ಯೋಜನೆ(OPS) ರಾಜಕೀಯ ಸಮಸ್ಯೆಯಾಗಿ ಬದಲಾಗುತ್ತಿರುವಾಗ ರಾಜಕೀಯ ಪಕ್ಷಗಳು ಚುನಾವಣಾ ಸಮಯದಲ್ಲಿ ಯೋಜನೆಯನ್ನು ಮರುಸ್ಥಾಪಿಸುವುದಾಗಿ ಭರವಸೆ ನೀಡುತ್ತಿರುವ ಸಮಯದಲ್ಲಿ ಭಗವಂತ್ ಮಾನ್ ನೇತೃತ್ವದ ಪಂಜಾಬ್ ಸರ್ಕಾರ ರಾಜ್ಯದಲ್ಲಿ OPS ಅನುಷ್ಠಾನಕ್ಕೆ ಅಧಿಸೂಚನೆಗೆ ಅನುಮೋದಿಸಿದೆ.
ಈ ನಿರ್ಧಾರದಿಂದ 1.75 ಲಕ್ಷ ಸರ್ಕಾರಿ ನೌಕರರಿಗೆ ಪ್ರಯೋಜನವಾಗಲಿದೆ. ಪ್ರಸ್ತುತ, ಸುಮಾರು 1.26 ಲಕ್ಷ ನೌಕರರು ಈಗಾಗಲೇ ಹಳೆಯ ಪಿಂಚಣಿ ಯೋಜನೆಗೆ ಒಳಪಟ್ಟಿದ್ದಾರೆ. ಪ್ರಸ್ತುತ ಹೊಸ ಪಿಂಚಣಿ ಯೋಜನೆ(ಎನ್.ಪಿ.ಎಸ್.) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಬಹುಕಾಲದ ಬೇಡಿಕೆಯಾಗಿದೆ ಎಂದು ಸರ್ಕಾರದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಒಪಿಎಸ್ ವಿಷಯವು ಈಗ ರಾಜಕೀಯ ವಿಚಾರವಾಗಿದೆ. ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಾರ್ಟಿ(ಎಎಪಿ) ನಂತಹ ಪಕ್ಷಗಳು ತಮ್ಮ ಚುನಾವಣಾ ಭರವಸೆಗಳ ಭಾಗವಾಗಿ ಯೋಜನೆಯನ್ನು ಮರುಸ್ಥಾಪಿಸುತ್ತಿವೆ. ರಾಜಸ್ಥಾನ ಮತ್ತು ಛತ್ತೀಸ್ಗಢದ ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ಸಹ ಯೋಜನೆಯನ್ನು ಮರುಸ್ಥಾಪಿಸುವ ಪ್ರಕ್ರಿಯೆಯಲ್ಲಿವೆ.
ಕರ್ನಾಟಕದಲ್ಲಿಯೂ ಎನ್.ಪಿ.ಎಸ್. ನೌಕರರು ಹಳೆ ಪಿಂಚಣಿಗಾಗಿ ಹೋರಾಟ ನಡೆಸಿದ್ದಾರೆ.