ಗುಜರಾತ್ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಅಧಿಕಾರಿ ಪಬ್ಲಿಸಿಟಿ ಸ್ಟಂಟ್ ಮಾಡಿದ್ದು, ಇದಕ್ಕಾಗಿ ಅವರನ್ನು ಚುನಾವಣಾ ಕರ್ತವ್ಯದಿಂದ ತೆಗೆದುಹಾಕಿರುವುದಾಗಿ ತಿಳಿದುಬಂದಿದೆ.
ಐಎಎಸ್ ಅಧಿಕಾರಿ ಅಭಿಷೇಕ್ ಸಿಂಗ್ ಅವರನ್ನು ಅಹಮದಾಬಾದ್‌ನ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಸಾಮಾನ್ಯ ವೀಕ್ಷಕರನ್ನಾಗಿ ನೇಮಿಸಲಾಗಿತ್ತು. ಅಧಿಕಾರಿ ಅಭಿಷೇಕ್ ಸಿಂಗ್ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋಗಳನ್ನು ಪೋಸ್ಟ್ ಮಾಡಿದ ಕಾರಣಕ್ಕಾಗಿ ಚುನಾವಣಾ ಆಯೋಗವು ಅವರನ್ನು ತೆಗೆದುಹಾಕಿದೆ ಎಂದು ಮೂಲಗಳು ತಿಳಿಸಿವೆ.
ಅಭಿಷೇಕ್ ಸಿಂಗ್ ಅವರು ಜನರಲ್ ಅಬ್ಸರ್ವರ್ ಆಗಿ ತಮ್ಮ ಪೋಸ್ಟ್ ಅನ್ನು ಹಂಚಿಕೊಳ್ಳಲು ಇನ್ ಸ್ಟಾಗ್ರಾಂ ಅನ್ನು ಬಳಸಿದ್ದರು. ಅವರ ಅಧಿಕೃತ ಸ್ಥಾನವನ್ನು ಪ್ರಚಾರದ ಸ್ಟಂಟ್ ಆಗಿ ಬಳಸಿದ್ದರು ಎಂದು ಚುನಾವಣಾ ಆಯೋಗದ ಆದೇಶದಲ್ಲಿ ವರದಿಯಾಗಿದೆ.
ಮುಂದಿನ ತಿಂಗಳು ನಡೆಯಲಿರುವ ಗುಜರಾತ್ ಚುನಾವಣೆಗೆ ಮುಂಚಿತವಾಗಿ, ಉತ್ತರ ಪ್ರದೇಶ ಕೇಡರ್ ಅಧಿಕಾರಿ ಅಭಿಷೇಕ್ ಸಿಂಗ್ ಅವರನ್ನು ಅಹಮದಾಬಾದ್‌ನ ಎರಡು ವಿಧಾನಸಭಾ ಕ್ಷೇತ್ರಗಳಾದ ಬಾಪುನಗರ ಮತ್ತು ಅಸರ್ವಾ ಕ್ಷೇತ್ರಗಳಿಗೆ ಸಾಮಾನ್ಯ ವೀಕ್ಷಕರನ್ನಾಗಿ ನೇಮಿಸಲಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಅಭಿಷೇಕ್ ಐಎಎಸ್ ಎಂದು ಕರೆಸಿಕೊಳ್ಳುವ ಅಧಿಕಾರಿ, ಇನ್ಸ್ಟಾಗ್ರಾಮ್ ನಲ್ಲಿ ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಒಂದರಲ್ಲಿ ಅವರು ಅಧಿಕೃತ ಕಾರಿನ ಪಕ್ಕದಲ್ಲಿ ನಿಂತಿದ್ದು ಕಾರಿನ ಮುಂಭಾಗದಲ್ಲಿ ಚುನಾವಣಾ ಆಯೋಗದ ವೀಕ್ಷಕ ಎಂದು ಬರೆದಿರುವ ಬೋರ್ಡ್ ಹಾಕಲಾಗಿದೆ.
ಮತ್ತೊಂದು ಪೋಸ್ಟ್‌ನಲ್ಲಿ ಅವರು ಇನ್ನೂ ಮೂವರು ಅಧಿಕಾರಿಗಳು ಮತ್ತು ಶಸ್ತ್ರಸಜ್ಜಿತ ಭದ್ರತಾ ಸಿಬ್ಬಂದಿಯೊಂದಿಗೆ ಕ್ಯಾಮೆರಾಗೆ ನಗುತ್ತಾ ಪೋಸ್ ನೀಡಿದ್ದಾರೆ.
ಮೂಲಗಳ ಪ್ರಕಾರ, ಚುನಾವಣಾ ಆಯೋಗವು ಅಧಿಕಾರಿಯ ಇನ್‌ಸ್ಟಾ ಪೋಸ್ಟ್ ಅನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ. ಅವರನ್ನು ಸಾಮಾನ್ಯ ವೀಕ್ಷಕ ಹುದ್ದೆಯಿಂದ ತಕ್ಷಣವೇ ಬಿಡುಗಡೆ ಮಾಡಲಾಗಿದೆ ಮತ್ತು ಮುಂದಿನ ಆದೇಶದವರೆಗೆ ಯಾವುದೇ ಚುನಾವಣಾ ಸಂಬಂಧಿತ ಕರ್ತವ್ಯದಿಂದ ಡಿಬಾರ್ ಮಾಡಲಾಗಿದೆ ಎಂದಿದೆ.
ಅಧಿಕಾರಿಯು ತಕ್ಷಣವೇ ಕ್ಷೇತ್ರವನ್ನು ತೊರೆದು ಅವರ ಮೂಲ ಕೆಲಸಕ್ಕೆ ವರದಿ ಮಾಡುವಂತೆ ಆದೇಶಿಸಲಾಗಿದೆ. ಅವರ ಪೋಸ್ಟ್‌ಗಳಲ್ಲಿ ಕಾಣಿಸಿಕೊಂಡಿದ್ದ ಕಾರು ಸೇರಿದಂತೆ ಗುಜರಾತ್‌ನಲ್ಲಿ ಅವರಿಗೆ ಒದಗಿಸಲಾದ ಎಲ್ಲಾ ಸರ್ಕಾರಿ ಸೌಲಭ್ಯಗಳನ್ನು ಸಹ ಕಸಿದುಕೊಳ್ಳಲಾಗಿದೆ.
ಶ್ರೀ ಸಿಂಗ್ ಅವರ ಸ್ಥಾನಕ್ಕೆ ಮತ್ತೊಬ್ಬ ಐಎಎಸ್ (ಭಾರತೀಯ ಆಡಳಿತ ಸೇವೆ) ಅಧಿಕಾರಿ ಕ್ರಿಶನ್ ಬಾಜ್‌ಪೇಯ್ ಅವರನ್ನು ನೇಮಿಸಲಾಗಿದೆ.
ಗುಜರಾತ್ ಹೊಸ ಸರ್ಕಾರಕ್ಕಾಗಿ ಡಿಸೆಂಬರ್ 1 ಮತ್ತು 5 ರಂದು ಮತದಾನ ನಡೆಯಲಿದೆ. ಡಿಸೆಂಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ.