ಕಳೆದ ಏಳೆಂಟು ತಿಂಗಳಿನಿಂದ ಹಾಲು ಉತ್ಪಾದಕರಿಗೆ ಸರ್ಕಾರದಿಂದ ಪ್ರೋತ್ಸಾಹ ಧನ ಬಿಡುಗಡೆ ಮಾಡದ ಕಾರಣ ಹಾಲು ಉತ್ಪಾದಕ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ರಾಜ್ಯದಲ್ಲಿ ಸುಮಾರು 9 ಲಕ್ಷಕ್ಕೂ ಅಧಿಕ ರೈತರು ಪ್ರತಿದಿನ ಸುಮಾರು 84 ಲಕ್ಷ ಲೀಟರ್ ಹಾಲು ಡೈರಿಗೆ ಹಾಕಲಿದ್ದು, ಪ್ರತಿ ಲೀಟರ್ ಹಾಲಿಗೆ ಸರ್ಕಾರದಿಂದ 5 ರೂಪಾಯಿ ಪ್ರೋತ್ಸಾಹ ಧನ ನೀಡಲಾಗುತ್ತದೆ. ಕೆಲವು ಜಿಲ್ಲೆಗಳಲ್ಲಿ ಮಾರ್ಚ್ ಮತ್ತೆ ಕೆಲವು ಜಿಲ್ಲೆಗಳಲ್ಲಿ ಮೇ ತಿಂಗಳಿನಿಂದ ಪ್ರೋತ್ಸಾಹ ಧನ ಬಿಡುಗಡೆ ಮಾಡಿಲ್ಲ.
ಕೆಎಂಎಫ್ ನಿಂದ ಸುಮಾರು 1450 ಕೋಟಿ ರೂ.ಗೂ ಅಧಿಕ ಪ್ರೋತ್ಸಾಹ ಧನವನ್ನು ರೈತರ ಖಾತೆಗಳಿಗೆ ಬಿಡುಗಡೆ ಮಾಡಬೇಕಿದೆ. ಆದರೆ, 7 -8 ತಿಂಗಳಿಂದ ಪ್ರೋತ್ಸಾಹ ಧನ ಬಿಡುಗಡೆ ಮಾಡದ ಕಾರಣ ಹಾಲು ಉತ್ಪಾದಕರಿಗೆ ಸಂಕಷ್ಟ ಎದುರಾಗಿದೆ. ಎಮ್ಮೆ ಹಸುಗಳಿಗೆ ಮೇವು, ಹಿಂಡಿ ತರಲು ತೊಂದರೆಯಾಗಿದೆ. ಕೂಡಲೇ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕೆಂಬ ಒತ್ತಾಯ ಕೇಳಿ ಬಂದಿದೆ.