ಮೈಸೂರು: ಗುಂಬಜ್ ಮಾದರಿಯ ಬಸ್ ನಿಲ್ದಾಣ ವಿವಾದ ಶಾಸಕ ಎಸ್.ಎ.ರಾಮದಾಸ್ ಹಾಗೂ ಸಂಸದ ಪ್ರತಾಪ್ ಸಿಂಹ ನಡುವಿನ ರಾಜಕೀಯ ಬಡಿದಾಟಕ್ಕೆ ಕಾರಣವಾಗಿದೆ. ಈ ನಡುವೆ ಕಿರುಕುಳಕ್ಕೆ ಬೇಸತ್ತಿದ್ದೇನೆ. ದಯವಿಟ್ಟು ನನ್ನನ್ನು ಬಿಟ್ಟುಬಿಡಿ ಎಂದು ಶಾಸಕ ರಾಮದಾಸ್ ಗದ್ಗದಿತರಾದ ಘಟನೆ ನಡೆದಿದೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ರಾಮದಾಸ್, ಬಸ್ ನಿಲ್ದಾಣದ ನೀಲನಕ್ಷೆಯಲ್ಲಿ ಏನಿದೆ ಎಂಬುದನ್ನು ಚರ್ಚಿಸಿಯೇ ಕೆಲಸ ಮಾಡುತ್ತಿರುವುದು. ಆದರೂ ಗುಂಬಜ್ ಮಾದರಿ ಬಸ್ ನಿಲ್ದಾಣ ಎಂದು ಅನಗತ್ಯವಾಗಿ ವಿವಾದ ಮಾಡಲಾಗುತ್ತಿದೆ. ಕಿರುಕುಳ ಕೊಟ್ಟು ಪಕ್ಷದಿಂದ ನನ್ನನ್ನು ಬಿಡಿಸಬೇಕು ಎಂದು ಈ ರೀತಿ ಮಾಡಲಾಗುತ್ತಿದೆ. ಕಿರುಕುಳಕ್ಕೆ ಬೇಸತ್ತು ಹೋಗಿದ್ದೇನೆ ದಯವಿಟ್ಟು ನನ್ನನ್ನು ಬಿಡಿ ಎಂದು ಹೇಳಿದರು.
ಕಿರುಕುಳದಿಂದಾಗಿ ಈಗಾಗಲೇ ಬಿಜೆಪಿ 11 ಶಾಸಕರಲ್ಲಿ 10 ಜನ ಪಕ್ಷವನ್ನೇ ತೊರೆದು ಹೋದರು. ಈಗ ಉಳಿದವನು ನಾನೊಬ್ಬ. ಈಗ ನನ್ನನ್ನೂ ಬಿಡಿಸಲು ಕಿರುಕುಳ ಕೊಡುತ್ತಿದ್ದಾರೆ. ಎಲ್ಲವನ್ನೂ ಬಿಟ್ಟು ನಾನು ನನ್ನ ಪಾಡಿಗೆ ಕ್ಷೇತ್ರದ ಜನತೆಗಾಗಿ ಕೆಲಸ ಮಾಡುತ್ತಿದ್ದೇನೆ. ಅಭಿವೃದ್ಧಿ ಒಂದೇ ನನ್ನ ಕನಸು. ಸಮಾಜಮುಖಿ ಕೆಲಸ ಮಾಡಬೇಕು ಎಂಬ ನಿಟ್ಟಿನಲ್ಲಿ ಸಾಯುವ ಮುನ್ನ ಏನನ್ನಾದರೂ ಸಾಧಿಸಬೇಕು ಎಂಬ ಗುರಿಯೊಂದಿಗೆ ಸಾಧ್ಯವಾದಷ್ಟು ಅಭಿವೃದ್ದಿ ಕೆಲಸ ಮಾಡುತ್ತಿದ್ದೆನೆ. ದಯವಿಟ್ಟು ಬಿಟ್ಟು ಬಿಡಿ… ಈಗಾಗಲೇ ಸಿಎಂ ಹಾಗೂ ರಾಜ್ಯಾಧ್ಯಕ್ಷರನ್ನು ಭೇಟಿಯಾಗಿ ಬಸ್ ನಿಲ್ದಾಣ ವಿಚಾರವಾಗಿ ತಜ್ಞರ ಸಮಿತಿ ರಚಿಸಲು ಹೇಳಿದ್ದೇನೆ.
ಸಮಿತಿಯವರು ಬಂದು ಪರಿಶೀಲನೆ ನಡೆಸಲಿ ತಪ್ಪಾಗಿದ್ದರೆ ಕ್ಷಮೆ ಕೇಳುತ್ತೇನೆ ಶಿಕ್ಷೆ ಅನುಭವಿಸಲೂ ಸಿದ್ಧ. ನಷ್ಟವನ್ನೂ ಸಂಬಳದಲ್ಲಿಯೇ ನಾನೇ ಭರಿಸುವುದಾಗಿಯೂ ಹೇಳಿದ್ದೇನೆ. ಇದಕ್ಕಿಂತ ಹೆಚ್ಚು ಏನು ಹೇಳಬೇಕು..? ಮಾಧ್ಯಮದವರಿಗೂ ಕೈ ಮುಗಿದು ಕೇಳುತ್ತೇನೆ ಪದೇ ಪದೇ ಇದನ್ನೇ ಕೇಳಬೇಡಿ ಎಲ್ಲವನ್ನೂ ಹೇಳಿದ್ದೇನೆ. ದಯವಿಟ್ಟು ನನ್ನ ಪಾಡಿಗೆ ಕೆಲಸ ಮಾಡಲು ಬಿಡಿ ಎಂದು ಗದ್ಗದಿತರಾದರು.