ಮೈಸೂರು: ಗುಂಬಜ್ ಮಾದರಿಯ ಬಸ್ ನಿಲ್ದಾಣ ವಿವಾದ ಬಿಜೆಪಿಯ ನಾಯಕರ ನಡುವೆಯೇ ಜಟಾಪಟಿಗೆ ಕಾರಣವಾಗಿದ್ದು, ಪರಸ್ಪರ ಪ್ರತಿಷ್ಠೆಯ ವಿಚಾರವೆಂಬಂತೆ ವಾಕ್ಸಮರಕ್ಕೆ ಇಳಿದಿದ್ದಾರೆ. ಈ ನಡುವೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬಸ್ ನಿಲ್ದಾಣ ಜನರಿಗೆ ನೆರಳು ನೀಡುತ್ತಿದೆಯೇ ಎಂಬುದು ಮುಖ್ಯ ಎಂದು ಹೇಳುವ ಮೂಲಕ ತಮ್ಮದೇ ರೀತಿಯಲ್ಲಿ ವಿಶ್ಲೇಷಣೆ ಮಾಡಿದ್ದಾರೆ.
ಮಂಡ್ಯ ಜಿಲ್ಲೆಯ ಕನ್ನಹಳ್ಳಿಯಲ್ಲಿ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ಬಸ್ ನಿಲ್ದಾಣ ಯಾವುದಾದರೇನು ? ನೆರಳು ನೀಡುವುದು ಮುಖ್ಯ. ಅಲ್ಲಿ ಗುಂಬಜ್ ಇದೆಯೋ, ಗೋಪುರ ಇದೆಯೋ ಮುಖ್ಯವಲ್ಲ. ನೆರಳು ನೀಡುವ ಕೆಲಸವಾಗುತ್ತಿದೆಯೇ ಎಂಬುದು ಮುಖ್ಯ. ಗುಂಬಜ್ ಬಸ್ ನಿಲ್ದಾಣ ತೆರವು ಮಾಡಬೇಕು ಎಂಬುದು ಮೂರ್ಖರ ಹೇಳಿಕೆ. ಆ ಪಕ್ಷದ ಶಾಸಕರೇ ಸಂಸದರಿಂದ ನೋವು ಅನುಭವಿಸುತ್ತಿದ್ದಾರೆ. ಇನ್ನು ಮತ ಹಾಕಿದ ಮತದಾರರ ಕತೆ ಏನು? ಎಂದು ಪ್ರಶ್ನಿಸಿದರು.
ಮುಂಬರುವ ಚುನಾವಣೆಯಲ್ಲಿ ಹೆಚ್ ಡಿ ಕೆ ಸಿಎಂ ಎಂಬ ಸರ್ವೆ ವಿಚಾರವಾಗಿ ಮಾತನಾಡಿದ ಅವರು, ಭಗವಂತ ಯಾರ ಹಣೆ ಮೇಲೆ ಏನು ಬರೆದಿದ್ದಾನೆ ಗೊತ್ತಿಲ್ಲ. ರಾಜ್ಯದ ಜನರೇ ಈ ಬಾರಿ ಜೆಡಿಎಸ್ ಕೈ ಹಿಡಿಬೇಕು ಎಂಬುದು ನಮ್ಮ ಆಶಯ. ಜೆಡಿಎಸ್ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.