ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಲುಕಿರುವ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಜಾರಿ ನಿರ್ದೇಶನಾಲಯದಿಂದ ವಿಚಾರಣೆ ಎದುರಿಸ್ತಿದ್ದಾರೆ. ವಿಚಾರಣೆಗಾಗಿ ಇಡಿ ಕಚೇರಿಗೆ ತೆರಳುವ ಮೊದಲು ಅವರು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. “ನಾನು ಮುಖ್ಯಮಂತ್ರಿ, ನಾನು ಸಾಂವಿಧಾನಿಕ ಹುದ್ದೆಯನ್ನು ಹೊಂದಿದ್ದೇನೆ. ಆದರೆ ನಾನು ದೇಶಬಿಟ್ಟು ಓಡಿಹೋಗುತ್ತೀನೇನೋ ಎಂಬ ರೀತಿಯಲ್ಲಿ ನನ್ನನ್ನು ಕರೆಸಲಾಗ್ತಿದೆ. ವಾಸ್ತವವಾಗಿ ಉದ್ಯಮಿಗಳನ್ನು ಹೊರತುಪಡಿಸಿ ಯಾವುದೇ ರಾಜಕೀಯ ನಾಯಕರು ದೇಶದಿಂದ ಓಡಿಹೋಗಿಲ್ಲ ಎಂದು ಹೇಮಂತ್ ಸೊರೆನ್ ಕಿಡಿಕಾರಿದ್ರು.
ತಮ್ಮ ವಿರುದ್ಧದ ಆರೋಪ ನಿರಾಧಾರ ಎಂದು ಅವರು ಪುನರುಚ್ಚರಿಸಿದ್ದಾರೆ. ಮುಖ್ಯಮಂತ್ರಿಯೊಬ್ಬರ ವಿರುದ್ಧ ಇಷ್ಟು ಲಘುವಾಗಿ ಆರೋಪ ಹೊರಿಸಲು ಹೇಗೆ ಸಾಧ್ಯ? ಇದರಿಂದ ನನಗೆ ಆಘಾತವಾಗಿದೆ ಎಂದಿದ್ದಾರೆ. ಕಳೆದ ಎರಡು ವರ್ಷಗಳಿಂದ ಇಡೀ ರಾಜ್ಯದಲ್ಲಿ ಕಲ್ಲು ಗಣಿಗಾರಿಕೆಯಿಂದ ಬರೋಬ್ಬರಿ 750 ಕೋಟಿಯಷ್ಟು ರಾಯಲ್ಟಿ ಆದಾಯ ಬಂದಿದೆ ಎಂದು ಇಡಿಗೆ ಪತ್ರ ಕಳುಹಿಸಿರುವುದಾಗಿ ಅವರು ತಿಳಿಸಿದ್ದಾರೆ. ಸರ್ಕಾರ ಬೀಳಿಸುವ ಷಡ್ಯಂತ್ರ ಇಲ್ಲಿಯವರೆಗೆ ರಹಸ್ಯವಾಗಿ ಕೆಲಸ ಮಾಡುತ್ತಿದೆ ಸೊರೇನ್ ಆರೋಪ ಮಾಡಿದ್ದಾರೆ. ಈಗ ಪಿತೂರಿ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಹೇಳಿದ್ದಾರೆ.
ಯಾವುದೇ ಗುಪ್ತ ಅಜೆಂಡಾ ಅಥವಾ ಉದ್ದೇಶವಿಲ್ಲದೆ ಇಡಿ ತನ್ನ ತನಿಖೆಯನ್ನು ನ್ಯಾಯಯುತ ಮತ್ತು ನಿಷ್ಪಕ್ಷಪಾತವಾಗಿ ನಡೆಸುವ ನಿರೀಕ್ಷೆಯಿದೆ. ನಾನು ಸಂವಿಧಾನ ಮತ್ತು ಕಾನೂನಿನ ನಿಯಮವನ್ನು ಎತ್ತಿಹಿಡಿಯಲು ಮತ್ತು ಪ್ರಾಮಾಣಿಕ ನಾಗರಿಕನಾಗಿ ನನ್ನ ಕರ್ತವ್ಯಗಳನ್ನು ನಿರ್ವಹಿಸುವ ಸಲುವಾಗಿ ಪ್ರಮಾಣ ವಚನ ಸ್ವೀಕರಿಸಿದ್ದೇನೆ. ನನಗೆ ನೀಡಿರುವ ಸಮನ್ಸ್ಗೆ ಅನುಗುಣವಾಗಿ ನಾನು ನಿಮ್ಮ ಕಚೇರಿಗೆ ಹಾಜರಾಗುತ್ತೇನೆ ಎಂದು ಹೇಮಂತ್ ಸೊರೇನ್ ಪತ್ರ ಕೂಡ ಬರೆದಿದ್ದಾರೆ. ಹೇಮಂತ್ ಸೊರೆನ್ ಆಗಮನಕ್ಕೂ ಮುನ್ನವೇ ರಾಂಚಿಯ ಇಡಿ ಕಚೇರಿಯ ಹೊರಗೆ ಭಾರೀ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಇಡಿ ಸೂಚನೆಯಂತೆ ಅಧಿಕೃತ ವೇಳಾಪಟ್ಟಿಯಂದು ವಿಚಾರಣೆಗೆ ಹಾಜರಾಗದೇ ಸೊರೆನ್ ಛತ್ತೀಸ್ಗಢ ಸರ್ಕಾರವು ಆಯೋಜಿಸುತ್ತಿರುವ ಬುಡಕಟ್ಟು ಉತ್ಸವದಲ್ಲಿ ಭಾಗವಹಿಸಿದ್ದರು. ವಿಚಾರಣೆಗಾಗಿ ಸಮನ್ಸ್ ಕಳುಹಿಸುವ ಬದಲು ಇಡಿ ತನ್ನನ್ನು ಬಂಧಿಸಲಿ ಎಂದು ಸವಾಲು ಹಾಕಿದ್ದರು. ಈ ಪ್ರಕರಣದಲ್ಲಿ ತಮಗೆ ನೀಡಿರುವ ಸಮನ್ಸ್ ಅನ್ನು ಮೂರು ವಾರಗಳ ಕಾಲ ಮುಂದೂಡುವಂತೆ ಸೊರೆನ್ ಕೋರಿದ್ದರು. ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರಿಗೆ ಜನತಾ ಪ್ರಾತಿನಿಧ್ಯ ಕಾಯಿದೆ 1951 ರ ಉಲ್ಲಂಘನೆಯ ತನಿಖೆಗಾಗಿ ಮತ್ತು ಸಾಹೇಬ್ಗಂಜ್ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ತನಿಖೆಗಾಗಿ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ.