ಬೆಂಗಳೂರು: ಮತದಾರರ ಮಾಹಿತಿ ಅಕ್ರಮವಾಗಿ ಸಂಗ್ರಹ ಆರೋಪ ಬೆನ್ನಲ್ಲೇ ಇದೀಗ ಚೆಲುಮೆ ಸಂಸ್ಥೆಗೆ ನೀಡಿದ್ದ ಅನುಮತಿಯನ್ನು ಬಿಬಿಎಂಪಿ ರದ್ದು ಮಾಡಿದೆ.
ಮತದಾರರ ಪಟ್ಟಿ ಪರಿಷ್ಕರಣೆಗೆ ಚೆಲುಮೆ ಸಂಸ್ಥೆಗೆ ಬಿಬಿಎಂಪಿ ಅನುಮತಿ ನೀಡಿತ್ತು. ಆದರೆ ಚೆಲುಮೆ ಸಂಸ್ಥೆ ಮತದಾರರ ಮಾಹಿತಿ ಅಕ್ರಮವಾಗಿ ಸಂಗ್ರಹಿಸಿ ದುರ್ಬಳಕೆ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೇ ಕಾಂಗ್ರೆಸ್ ಕೂಡ ರಾಜ್ಯ ಸರ್ಕಾರ ಹೊಂಬಾಳೆ ಹಾಗೂ ಚೆಲುಮೆ ಎಂಬ ಎರಡು ಖಾಸಗಿ ಸಂಸ್ಥೆಗಳ ಮೂಲಕ ಮತದಾರರ ಡೇಟಾ ಕಳ್ಳತನಕ್ಕೆ ಅನುಮತಿ ನೀಡಿದ್ದು, ಅಕ್ರಮದ ಹೊಣೆ ಹೊತ್ತು ಸಿಎಂ ಬಸವರಾಜ್ ಬೊಮ್ಮಾಯಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿತ್ತು.
ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಚೆಲುಮೆ ಸಂಸ್ಥೆಗೆ ಪಾಲಿಕೆ ನೀಡಿದ್ದ ಅನುಮತಿ ರದ್ದುಪಡಿಸಲಾಗಿದೆ. ನಿಯಮ ಉಲ್ಲಂಘನೆ ಆರೋಪ ಹಿನ್ನೆಲೆಯಲ್ಲಿ ಸಂಸ್ಥೆಗೆ ನೀಡಿದ್ದ ಅನುಮತಿಯನ್ನು ನಿನ್ನೆಯೇ ರದ್ದು ಪಡಿಸಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.