ನವದೆಹಲಿ: ಸುಮಾರು 17 ವರ್ಷಗಳ ಹಿಂದೆ ನಾಪತ್ತೆಯಾಗಿರುವ ಅಪ್ರಾಪ್ತ ಬಾಲಕನೊಬ್ಬನನ್ನು ಹುಡುಕಲು ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸುವಂತೆ ಸುಪ್ರೀಂ ಕೋರ್ಟ್ ಮಧ್ಯಪ್ರದೇಶ ಸರ್ಕಾರಕ್ಕೆ ಆದೇಶಿಸಿದೆ.
17 ವರ್ಷಗಳಿಂದ ಮಗನನ್ನು ಹುಡುಕಿ ಸುಸ್ತಾದ ತಂದೆ ಮಗನನ್ನು ಹುಡುಕಲು ಪೊಲೀಸರೂ ವಿಫಲವಾದ ಹಿನ್ನೆಲೆಯಲ್ಲಿ ಹೈಕೋರ್ಟ್ನಲ್ಲಿ ಅವರು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್ನಲ್ಲಿ ಅವರ ಅರ್ಜಿ ವಜಾಗೊಂಡಿತ್ತು. ಇದನ್ನು ಪ್ರಶ್ನಿಸಿ ತಂದೆ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.
ಯಾವುದೋ ಅಪರಾಧ ಪ್ರಕರಣದಲ್ಲಿ ತನ್ನ ಮಗ ಮನೋಜ್ ಪ್ರಜಾಪತಿಯನ್ನು ಪೊಲೀಸರು ಆರೋಪಿ ಮಾಡಿದ್ದಾರೆ. ಅದಾದ ಮೇಲೆ ಮಗ ಕಾಣೆಯಾಗಿದ್ದು, ಪೊಲೀಸರು ಮಗನನ್ನು ಹುಡುಕುವಲ್ಲಿ ವಿಫಲರಾಗಿದ್ದಾರೆ ಎಂದು ತಂದೆ ದೂರಿದ್ದಾರೆ.
ಈ ಹಿಂದೆ ಈ ಬಗ್ಗೆ ತನಿಖೆ ನಡೆಸುವಂತೆ ಕೋರ್ಟ್ ಪೊಲೀಸರಿಗೆ ಸೂಚಿಸಿತ್ತು. ಆದರೆ ಪೊಲೀಸರು ಸರಿಯಾದ ತನಿಖೆ ನಡೆಸಲಿಲ್ಲ ಎಂದು ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಮತ್ತು ಸಿ.ಟಿ.ರವಿಕುಮಾರ್ ಅವರ ಪೀಠವು, ಸಿಐಟಿ ರಚಿಸಿ ತನಿಖೆ ನಡೆಸುವಂತೆ ಆದೇಶಿಸಿದೆ.