ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಮಿತಿ ಮೀರಿದೆ. ರಾಜಧಾನಿ ಬೆಂಗಳೂರಿನಲ್ಲಿ ಪ್ರಜಾಪ್ರಭುತ್ವದ ಹಕ್ಕನ್ನೇ ಸರ್ಕಾರ ಕಸಿದುಕೊಳ್ಳುತ್ತಿದೆ. ಮತದಾರರ ಮಾಹಿತಿ ಸಂಗ್ರಹ ಕಳ್ಳತನ ಮಾಡುತ್ತಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಣದೀಪ್ ಸುರ್ಜೇವಾಲ, ರಾಜಧಾನಿಯಲ್ಲಿ ಗುತ್ತಿಗೆಯಲ್ಲಿ ಮಾತ್ರವಲ್ಲ, ವೋಟ್, ಮತಗಳನ್ನು ಕದಿಯಲು ಸಿಎಂ ಬಸವರಾಜ್ ಬೊಮ್ಮಾಯಿ ಯತ್ನಿಸಿದ್ದಾರೆ. ಎರಡು ಖಾಸಗಿ ಸಂಸ್ಥೆಗಳಿಗೆ ವೋಟರ್ ಮಾಹಿತಿ ಸಂಗ್ರಹಿಸಲು ಅನುಮತಿ ನೀಡಿದ್ದಾರೆ. ಮತದಾರರ ಡೇಟಾ ಸಂಗ್ರಹ ಅಪರಾಧ. ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಅಕ್ರಮ ಬಯಲಾಗಿದೆ ಎಂದು ಆರೋಪಿಸಿದರು.
ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಬಿಬಿಎಂಪಿ ಚುನಾವಣಾಧಿಕಾರಿಯೂ ಆಗಿದ್ದಾರೆ. ಮಹದೇವಪುರದಲ್ಲಿ ಜಾಗೃತಿ ನೀಡಲು ಚೆಲುಮೆ ಎನ್ ಜಿ ಓ ಗೆ ಅನುಮತಿ ನೀಡಿದ್ದರು. ಈ ಕಂಪನಿ ಡಿಜಿಟಲ್ ಸಮೀಕ್ಷ ಎಂಬ ಮೊಬೈಲ್ ಆಪ್ ಹೊಂದಿದೆ. ಈ ಮೂಲಕ ವೋಟರ್ ಡೇಟಾ ಸಂಗ್ರಹಿಸಿದೆ. ಬೂತ್ ಮಟ್ಟದ ಅಧಿಕಾರಿಯಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಹೊಂಬಾಳೆ ಪ್ರೈವೆಟ್ ಲಿಮಿಟೆಡ್ ಹಾಗೂ ಚೆಲುಮೆ ಎನ್ ಜಿ ಒ ಪದಾಧಿಕಾರಿಗಳು ಎಲ್ಲರೂ ಒಂದೇ ಸಂಸ್ಥೆಗೆ ಸೇರಿದವರಾಗಿದ್ದಾರೆ. ರಾಜ್ಯ ಸರ್ಕಾರ ಗಂಭೀರ ಅಕ್ರಮದಲ್ಲಿ ತೊಡಗಿದ್ದು, ಮತದಾರರ ಚುನಾವಣೆ ಹಕ್ಕನ್ನೇ ಕಸಿದುಕೊಳ್ಳುತ್ತಿದೆ ಎಂದು ಆರೋಪಿಸಿದರು.