ಇಡೀ ದೇಶವನ್ನೇ ಬೆಚ್ಚಿಬೀಳಿಸಿರುವ ದೆಹಲಿಯಲ್ಲಿ ಯುವತಿ ಹತ್ಯೆ ಕೇಸ್ ನ ತನಿಖೆಯಲ್ಲಿ ಆರೋಪಿಯು ಆಘಾತಕಾರಿ ಅಂಶಗಳನ್ನು ಬಾಯ್ಬಿಡುತ್ತಿದ್ದಾನೆ. ಮೇ ತಿಂಗಳಲ್ಲಿ ಅಫ್ತಾಬ್ ಪೂನಾವಾಲಾ ಎಂಬಾತನಿಂದ ಹತ್ಯೆಗೀಡಾದ 26 ವರ್ಷದ ಯುವತಿ ಶ್ರದ್ಧಾಳ ತಲೆಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
ಆಕೆಯ ದೇಹವನ್ನು 35 ಭಾಗಗಳಾಗಿ ವಿಭಜಿಸುವಾಗ ಶ್ರದ್ಧಾ ತಲೆಯನ್ನು ವಿರೂಪಗೊಳಿಸಲು ಸಾಧ್ಯವಾಗದಿರಬಹುದು. ಮೃತಳ ಗುರುತನ್ನು ಸ್ಥಾಪಿಸಲು ಅದು ಸಹಾಯ ಮಾಡುತ್ತದೆ ಎಂದು ಪೊಲೀಸರು ಭಾವಿಸಿದ್ದಾರೆ.
ಆದರೆ ಆರೋಪಿ ಮೃತಳ ತಲೆಯನ್ನು ಆಕೆಯ ಸಂಬಂಧದ ನೆನೆಪಿಗಾಗಿ ಪ್ರತಿದಿನ ಫ್ರಿಡ್ಜ್ ತೆಗೆದು ನೋಡುತ್ತಿದ್ದ ಎಂಬುದನ್ನು ಬಾಯ್ಬಿಟ್ಟಿದ್ದಾನೆ. ಶ್ರದ್ಧಾಳ ದೇಹವನ್ನು ತುಂಡುಗಳಾಗಿ ಕತ್ತರಿಸಿ ಒಂದು ಅಥವಾ ಎರಡು ತುಂಡುಗಳನ್ನು ಪ್ರತಿದಿನ 18 ದಿನದವರೆಗೆ ನಗರದ ಹಲವು ಪ್ರದೇಶಗಳಲ್ಲಿ ಆರೋಪಿ ಎಸೆದಿದ್ದ. ಅವುಗಳ ಹುಡುಕಾಟದಲ್ಲಿ ಪೊಲೀಸರು ತೊಡಗಿದ್ದಾರೆ.
ತಲೆ ಪತ್ತೆಯಾದ ನಂತರ ಪೊಲೀಸರು ಸ್ಕಲ್ ಸೂಪರ್‌ಇಂಪೊಸಿಷನ್ ತಂತ್ರಜ್ಞಾನವನ್ನು ಬಳಸಿಕೊಂಡು ಮೃತಳ ಗುರುತನ್ನು ಪತ್ತೆಹಚ್ಚಲಿದ್ದಾರೆ. ಸದ್ಯಕ್ಕೆ ಮೃತಳ ತಂದೆ ವಿಕಾಸ್ ಅವರ ಡಿಎನ್‌ಎ ಮಾದರಿಯೊಂದಿಗೆ ಹೊಂದಾಣಿಕೆಯಾಗಬೇಕಿದೆ. ಪೊಲೀಸರು ಇಲ್ಲಿಯವರೆಗೆ ಪತ್ತೆಹಚ್ಚಿರುವ ಮೂಳೆಗಳನ್ನು ಡಿಎನ್‌ಎ ಮಾದರಿಗಾಗಿ ಕಳುಹಿಸಿದ್ದಾರೆ ಮತ್ತು ವರದಿಗಾಗಿ ಕಾಯಲಾಗುತ್ತಿದೆ.