ತಮ್ಮ ಹಾಗು ಪತಿಯ ವಿರುದ್ಧ ದಾಖಲಾಗಿರುವ ವಂಚನೆ ಪ್ರಕರಣವನ್ನು ರದ್ದುಗೊಳಿಸುವಂತೆ ನಟಿ ಸನ್ನಿ ಲಿಯೋನ್ ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ಮತ್ತು ಪತಿ ಡೇನಿಯಲ್ ವೆಬರ್ ಹಾಗು ಅವರ ಒಬ್ಬ ಉದ್ಯೋಗಿ ವಿರುದ್ಧ ದಾಖಲಾಗಿರುವ ವಂಚನೆ ಪ್ರಕರಣವನ್ನು ರದ್ದುಗೊಳಿಸಬೇಕೆಂದು ಕೋರಿದ್ದಾರೆ.
ಸನ್ನಿ ಲಿಯೋನ್, ಆಕೆಯ ಪತಿ ಮತ್ತು ಉದ್ಯೋಗಿ ವಿರುದ್ಧ ಕೇರಳ ಮೂಲದ ಎರ್ನಾಕುಲಂ ಜಿಲ್ಲೆಯ ನಿವಾಸಿ ಈವೆಂಟ್ ಮ್ಯಾನೇಜರ್ ಶಿಯಾಸ್ ಕುಂಜುಮೊಹಮ್ಮದ್ ಅವರು ಪ್ರಕರಣ ದಾಖಲಿಸಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ಕಾರ್ಯಕ್ರಮದಲ್ಲಿ ಸನ್ನಿ ಲಿಯೋನ್ ಭಾಗವಹಿಸುವಿಕೆಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಈವೆಂಟ್ ನಲ್ಲಿ ಕಾಣಿಸಿಕೊಳ್ಳಲು ಮತ್ತು ಪ್ರದರ್ಶನ ನೀಡಲು ಸನ್ನಿ ಲಿಯೋನ್‌ಗೆ ಲಕ್ಷಾಂತರ ರೂಪಾಯಿಗಳನ್ನು ನೀಡಲಾಗಿತ್ತು. ಆದರೆ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ ಎಂದು ದೂರುದಾರರು ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ರಾಜ್ಯ ಪೊಲೀಸ್‌ನ ಅಪರಾಧ ವಿಭಾಗವು ದಾಖಲಿಸಿದ ಎಫ್‌ಐಆರ್‌ನಲ್ಲಿ ಸನ್ನಿ ಲಿಯೋನ್, ಡೇನಿಯಲ್ ವೆಬರ್ ಮತ್ತು ಅವರ ಉದ್ಯೋಗಿಗಳ ವಿರುದ್ಧ ಸೆಕ್ಷನ್ 406 (ಕ್ರಿಮಿನಲ್ ನಂಬಿಕೆಯ ಉಲ್ಲಂಘನೆ), 420 (ವಂಚನೆ ಮತ್ತು ಅಪ್ರಾಮಾಣಿಕತೆ ) ಭಾರತೀಯ ದಂಡ ಸಂಹಿತೆಯ 34 (ಸಾಮಾನ್ಯ ಉದ್ದೇಶದ ಮುಂದುವರಿಕೆಗಾಗಿ ಹಲವಾರು ವ್ಯಕ್ತಿಗಳು ಮಾಡಿದ ಕೃತ್ಯಗಳು) ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳನ್ನು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇದೀಗ ನಟಿ ಸನ್ನಿ ಲಿಯೋನ್ ತನ್ನ ಅರ್ಜಿಯಲ್ಲಿ ತಾನು, ತನ್ನ ಪತಿ ಮತ್ತು ತನ್ನ ಉದ್ಯೋಗಿ ಆರೋಪಗಳಲ್ಲಿ ನಿರಪರಾಧಿ ಎಂದು ಹೇಳಿದ್ದಾರೆ. ಆಕೆಯ ವಿರುದ್ಧ ಯಾವುದೇ ವಸ್ತು ಸಾಕ್ಷ್ಯಗಳಿಲ್ಲ ಮತ್ತು ಅರ್ಜಿದಾರರು ಯಾವುದೇ ನಷ್ಟವನ್ನು ಎದುರಿಸಿಲ್ಲ ಎಂದು ನಟಿ ಹೇಳಿದ್ದಾರೆ.
ಜುಲೈ 2022 ರಲ್ಲಿ ದೂರುದಾರರು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಸಿವಿಲ್ ಮೊಕದ್ದಮೆಯಾಗಿ ಮಾಡಿದ ಅದೇ ಮನವಿಯನ್ನು ಸಾಕ್ಷ್ಯಾಧಾರದ ಕೊರತೆಯಿಂದಾಗಿ ವಜಾಗೊಳಿಸಲಾಯಿತು. ಇದನ್ನು ಸೂಚಿಸಿದ ಸನ್ನಿ ಲಿಯೋನ್ ತಮ್ಮ ವಿರುದ್ಧದ ವಿಚಾರಣೆಯನ್ನು ರದ್ದುಗೊಳಿಸುವಂತೆ ನ್ಯಾಯಾಲಯವನ್ನು ಕೋರಿದ್ದಾರೆ.