ಚಿಲ್ಲರೆ ಮತ್ತು ಸಗಟು ಹಣದುಬ್ಬರ ದರ ಅಕ್ಟೋಬರ್ ನಲ್ಲಿ ಇಳಿಕೆಯಾಗಿದೆ. ಹೀಗಿದ್ದರೂ ಕೂಡ ರೆಪೊ ದರ ಏರಿಕೆ ಮಾಡಲು ಆರ್‌ಬಿಐ ಚಿಂತನೆ ನಡೆಸಿದೆ.
ಕನಿಷ್ಠ ಶೇಕಡ 0.35 ರಷ್ಟು ರೆಪೊ ದರ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆರ್‌ಬಿಐ ರೆಪೊ ದರ ಏರಿಕೆ ಮುಂದುವರೆಸುವ ಸಾಧ್ಯತೆ ಇದ್ದು, ಈ ಹೊರೆಯನ್ನು ಬ್ಯಾಂಕುಗಳು ಗ್ರಾಹಕರಿಗೆ ಸಹಜವಾಗಿ ವರ್ಗಾವಣೆ ಮಾಡುತ್ತವೆ. ಇದರ ಪರಿಣಾಮ ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲಗಳು ಸೇರಿದಂತೆ ಎಲ್ಲಾ ಸಾಲಗಳ ಮೇಲಿನ ಬಡ್ಡಿ ದರ ಮತ್ತೆ ಹೆಚ್ಚಾಗಲಿದೆ. ಇಎಂಐ ಹೊರೆಯನ್ನು ಗ್ರಾಹಕರು ಮತ್ತಷ್ಟು ಭರಿಸಬೇಕಿದೆ.
ಮೇ ತಿಂಗಳಿಗೆ ಮೊದಲು ಸುಮಾರು ಶೇಕಡ 7 ರಷ್ಟು ಇದ್ದ ಗೃಹ ಸಾಲದ ಬಡ್ಡಿ ದರ ಈಗ ಶೇಕಡ 9 ರವರೆಗೂ ಏರಿಕೆಯಾಗಿದ್ದು, ಇದು ಮತ್ತಷ್ಟು ಏರಿಕೆ ಕಾಣಬಹುದು ಎಂದು ಹೇಳಲಾಗಿದೆ. ಆರ್‌ಬಿಐ ರೆಪೊ ದರ ಏರಿಕೆ ನಿಲುವು ಮುಂದುವರೆಸಲಿದ್ದು, ಡಿಸೆಂಬರ್ ನಲ್ಲಿ ಹಣಕಾಸು ಸ್ಥಿತಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬಹುದು, ಇಲ್ಲವೇ ರೆಪೊ ದರ ಏರಿಕೆ ಮಾಡಬಹುದು ಎಂದು ಹೇಳಲಾಗಿದೆ.
ಅಕ್ಟೋಬರ್ ನಲ್ಲಿ ಸಗಟು ಮತ್ತು ಚಿಲ್ಲರೆ ಹಣದುಬ್ಬರ ಕಡಿಮೆಯಾಗಿದ್ದರೂ ಕೂಡ ಆರ್‌ಬಿಐ ಗುರಿಗಿಂತ ಮೇಲ್ಮಟ್ಟದಲ್ಲಿ ಇರುವುದರಿಂದ ರೆಪೊ ದರ ಏರಿಕೆಯಾಗಬಹುದು. ಹಣದುಬ್ಬರ ನಿಯಂತ್ರಿಸಲು ಮೇ ತಿಂಗಳಿನಿಂದ ಆರ್‌ಬಿಐ ರೆಪೊ ದರವನ್ನು ಏರಿಕೆ ಮಾಡುತ್ತಲೇ ಬಂದಿದ್ದು, ಹಂತ ಹಂತವಾಗಿ ಶೇಕಡ 1.9 ರಷ್ಟು ರೆಪೊ ದರ ಹೆಚ್ಚಳ ಮಾಡಲಾಗಿದೆ. ಈಗ ಮತ್ತೆ ಶೇಕಡ 0.35 ರಷ್ಟು ರೆಪೊ ದರ ಏರಿಕೆಯಾಗುವ ಸಾಧ್ಯತೆ ಇದ್ದು, ಜನತೆಗೆ ಮತ್ತೆ ಬಡ್ಡಿ ಹೊರೆ ಬೀಳಲಿದೆ ಎಂದು ಹೇಳಲಾಗಿದೆ.