ಇ ಕಾಮರ್ಸ್ ದೈತ್ಯ ಅಮೆಜಾನ್ ಕುರಿತಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬೆಂಬಲಿತ ವಾರ ಪತ್ರಿಕೆ ‘ಆರ್ಗನೈಸರ್’ ಗುರುತರ ಆರೋಪ ಮಾಡಿದೆ. ಭಾರತದಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸುವ ಮಿಶಿನರಿಗಳಿಗೆ ಅಮೆಜಾನ್ ಹಣಕಾಸು ನೆರವು ನೀಡುತ್ತಿದೆ ಎಂದು ಹೇಳಿದೆ.
ಅಮೆರಿಕದ ಬ್ಯಾಪ್ಟಿಸ್ಟ್ ಚರ್ಚ್ ಈಶಾನ್ಯ ರಾಜ್ಯಗಳು ಸೇರಿದಂತೆ ಭಾರತದ ವಿವಿಧೆಡೆ ಮತಾಂತರ ಕಾರ್ಯದಲ್ಲಿ ತೊಡಗಿದ್ದು, ಇದಕ್ಕೆ ಅಮೆಜಾನ್ ಹಣಕಾಸು ನೆರವು ನೀಡುತ್ತಿದೆ. ಅಲ್ಲದೆ ಇತರೆ ಕೆಲವು ಬಹುರಾಷ್ಟ್ರೀಯ ಕಂಪನಿಗಳು ಸಹ ಅಕ್ರಮಣ ವರ್ಗಾವಣೆಯಲ್ಲಿ ತೊಡಗಿರುವ ಶಂಕೆ ಇದೆ ಎಂದು ಆರ್ಗನೈಸರ್ ಆರೋಪಿಸಿದೆ.
ಮತಾಂತರಗೊಳಿಸಿರುವ ವಿಚಾರಕ್ಕೆ ಪುಷ್ಠಿ ನೀಡುವಂತೆ ಅಮೆರಿಕದ ಬ್ಯಾಪ್ಟಿಸ್ಟ್ ಚರ್ಚ್ ನಿಂದ ಹಣಕಾಸು ನೆರವು ಪಡೆಯುತ್ತಿರುವ ಅದರ ಅಂಗಸಂಸ್ಥೆ, ಆಲ್ ಇಂಡಿಯಾ ಮಿಷನ್, ಈಶಾನ್ಯ ಭಾರತದಲ್ಲಿ ತಾವು 25,000 ಜನರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸಿದ್ದೇವೆ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದೆ ಎಂದು ‘ಆರ್ಗನೈಸರ್’ ತನ್ನ ವರದಿಯಲ್ಲಿ ತಿಳಿಸಿದೆ.