ಮದುಮಕ್ಕಳಂತೆ ಶೃಂಗಾರ ಮಾಡಿಕೊಳ್ಳುವ ಆಸೆ ಬಹುತೇಕ ಎಲ್ಲರಿಗೂ ಇರುತ್ತದೆ. ಈ ಯೌವನದ ದಿನಗಳನ್ನು ನೆನಪಿಸಿಕೊಂಡು ವೃದ್ಧಾಪ್ಯದಲ್ಲಿಯೂ ಕೆಲವರು ಈ ಆಸೆಯನ್ನು ಮತ್ತೊಮ್ಮೆ ಈಡೇರಿಸಿಕೊಂಡರೆ, ಇನ್ನು ಕೆಲವು ಕುಟುಂಬಗಳಲ್ಲಿ ಮಕ್ಕಳು ಇಲ್ಲವೇ ಮೊಮ್ಮಕ್ಕಳು ಸೇರಿ ಹಿರಿಯರನ್ನು ಮದುಮಕ್ಕಳಂತೆ ಶೃಂಗರಿಸಿ ಖುಷಿ ಪಡುವುದು ಇದೆ.
ಇಂಥದ್ದೇ ಒಂದು ಹೃದಯಸ್ಪರ್ಷಿ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ವೃದ್ಧೆಯೊಬ್ಬಳನ್ನು ಆಕೆಯ ಮಕ್ಕಳು, ಮೊಮ್ಮಕ್ಕಳು ಸೇರಿ ಮದುಮಗಳಂತೆ ಶೃಂಗಾರ ಮಾಡಿದ್ದಾರೆ. ನಂತರ ಪತಿಗೆ ಈ ಕುರಿತು ಸರ್ಪ್ರೈಸ್ ನೀಡಿದ್ದಾರೆ. ಅಡುಗೆ ಮನೆ ಸಮೀಪದ ಸೋಫಾದಲ್ಲಿ ವೃದ್ಧೆಯನ್ನು ಕುಳ್ಳರಿಸಿ ನಂತರ ಆಕೆಯ ಪತಿಯನ್ನು ಮಕ್ಕಳು ಅಲ್ಲಿಗೆ ಕರೆತರುತ್ತಾರೆ.
ಪತ್ನಿಯನ್ನು ನೋಡಿದ ವೃದ್ಧ ಆನಂದದಿಂದ ಕುಣಿದಾಡುವಂತೆ ಭಾವುಕರಾಗುವುದನ್ನು ವಿಡಿಯೋದಲ್ಲಿ ನೋಡಬಹುದು. ಪತಿ ದಶಕಗಳ ಹಿಂದೆ ಸರಿದು ಆ ದಿನಗಳನ್ನು ನೆನಪಿಸಿಕೊಳ್ಳುವಂತೆ ಭಾಸವಾದರೆ, ಪತಿಯನ್ನು ನೋಡಿ ವೃದ್ಧೆ ನಾಚುತ್ತಿರುವುದನ್ನೂ ಇದರಲ್ಲಿ ನೋಡಬಹುದಾಗಿದೆ. ಮನೆಯಲ್ಲಿ ಹಿರಿಯರಿದ್ದರೆ ಇಂಥ ಸಣ್ಣಪುಟ್ಟ ಸಂತೋಷವನ್ನು ಅವರಿಗೆ ನೀಡಬೇಕಿದೆ ಎಂದು ಹಲವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.