ಉಕ್ರೇನ್ ವಿರುದ್ಧ ರಷ್ಯಾ ಸಮರ ಸಾರಿ 9 ತಿಂಗಳೇ ಕಳೆದು ಹೋಗಿವೆ. ಯುದ್ಧ ಇನ್ನೂ ನಿಂತಿಲ್ಲ. ಅದೆಷ್ಟೋ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಯೋಧರ ಸಾವೂ ದಿನದಿಂದ ದಿನಕ್ಕೆ ಏರುತ್ತಿದೆ. ಯೋಧರಾಗಿರುವ ತಮ್ಮ ಮಕ್ಕಳು, ಮೊಮ್ಮಕ್ಕಳನ್ನು ವಾಪಸ್ ನೋಡುತ್ತೆವೆಯೋ ಇಲ್ಲವೋ ಎಂಬ ಭೀತಿ ಕುಟುಂಬಸ್ಥರದ್ದು. ಇಂಥ ಪರಿಸ್ಥಿತಿಯ ನಡುವೆ ಕಂಬನಿ ಮಿಡಿಯುವ ವಿಡಿಯೋ ಒಂದು ವೈರಲ್ ಆಗಿದೆ.
ಉಕ್ರೇನ್ ಸೈನಿಕನಾಗಿರುವ ತನ್ನ ಮೊಮ್ಮಗ ಮನೆಗೆ ಬಂದದ್ದನ್ನು ನೋಡಿ ಅಜ್ಜಿಯೊಬ್ಬರು ಸಂತೋಷದಿಂದ ಅಳುತ್ತಿರುವ ಹೃದಯ ಸ್ಪರ್ಶಿ ವಿಡಿಯೋ ಇದಾಗಿದೆ. ಮೊಮ್ಮಗ ವಾಪಸ್ ಬರುತ್ತಿದ್ದಾನೆ ಎಂದು ತಿಳಿಯುತ್ತಲೇ ವೃದ್ಧೆಯೊಬ್ಬಳು ಮನೆಯಿಂದ ಹೊರ ಬಂದು ತೆರೆದ ಗೇಟ್ ಬಳಿ ಮಂಡಿಯೂರಿ ಕುಳಿತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ತನ್ನ ತೋಳಿನ ಮೇಲೆ ಹಳದಿ ರಿಬ್ಬನ್ನೊಂದಿಗೆ ಮಿಲಿಟರಿ ಸಮವಸ್ತ್ರದಲ್ಲಿ ಒಬ್ಬ ಯುವಕ ಅಜ್ಜಿಯನ್ನು ತಬ್ಬಿಕೊಳ್ಳಲು ಓಡೋಡಿ ಹೋಗುವುದು ನಂತರ ಮೆಷಿನ್ ಗನ್ ಅನ್ನು ಕೆಳಗಿಟ್ಟು ಭಾವುಕನಾಗಿ ಅಜ್ಜಿಯನ್ನು ಅಪ್ಪಿಕೊಳ್ಳುವುದು ಎಂಥವರ ಮನವೂ ಕಲಕುವಂತೆ ಮಾಡುತ್ತಿದೆ.
ಉಕ್ರೇನಿಯನ್ ಪತ್ರಕರ್ತ ಮೈರೋಸ್ಲಾವಾ ಪೆಟ್ಸಾ ಅವರ ಟ್ವೀಟ್ ಪ್ರಕಾರ, ರಷ್ಯಾದ ಪಡೆಗಳು ಶುಕ್ರವಾರ ನಗರದಿಂದ ಹಿಮ್ಮೆಟ್ಟುವುದಾಗಿ ಘೋಷಿಸಿದ ನಂತರ ಖೆರ್ಸನ್ನಲ್ಲಿ ವೀಡಿಯೊವನ್ನು ಚಿತ್ರೀಕರಿಸಲಾಗಿದೆ ಎಂದು ಹೇಳಿದ್ದಾರೆ.