ಇಸ್ತಾನ್‌ಬುಲ್‌ನ ಹೃದಯಭಾಗದಲ್ಲಿರುವ ಜನನಿಬಿಡ ರಸ್ತೆಯಲ್ಲಿ ಭಾನುವಾರ ಸಂಭವಿಸಿದ ಪ್ರಬಲ ಸ್ಫೋಟದಲ್ಲಿ ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಮತ್ತು 38 ಜನರು ಗಾಯಗೊಂಡಿದ್ದಾರೆ.
“ಪ್ರಾಥಮಿಕ ವರದಿಗಳ ಪ್ರಕಾರ, ಇಸ್ತಿಕ್‌ಲಾಲ್ ಸ್ಟ್ರೀಟ್‌ನಲ್ಲಿ ಸಂಭವಿಸಿದ ಸ್ಫೋಟದಲ್ಲಿ 4 ಜನರು ಸಾವನ್ನಪ್ಪಿದ್ದಾರೆ ಮತ್ತು 38 ಜನರು ಗಾಯಗೊಂಡಿದ್ದಾರೆ” ಎಂದು ಇಸ್ತಾಂಬುಲ್ ಗವರ್ನರ್ ಅಲಿ ಯೆರ್ಲಿಕಾಯಾ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.
ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾದ ವೀಡಿಯೊದಲ್ಲಿ ಭಾರೀ ಸ್ಫೋಟದ ಬಳಿಕ ಜ್ವಾಲೆ ಕಾಣಿಸಿಕೊಂಡಿದೆ. ಶಬ್ಧ ಕೇಳಿದ ತಕ್ಷಣ ಪಾದಚಾರಿಗಳು ಹಿಂದುರುಗಿ ಓಡುತ್ತಾರೆ.
ಸ್ಫೋಟವು ಪ್ರಸಿದ್ಧವಾದ ಇಸ್ತಿಕ್‌ಲಾಲ್ ಶಾಪಿಂಗ್ ಸ್ಟ್ರೀಟ್‌ನಲ್ಲಿ ಸಂಜೆ 4:00 (1300 GMT) ನಂತರ ಸಂಭವಿಸಿದೆ. ಸ್ಫೋಟ ಸಂಭವಿಸಿದ ಕಾರಣ ಇನ್ನೂ ತಿಳಿದಿಲ್ಲ. ಇಸ್ತಿಕ್ ಲಾಲ್ ಶಾಪಿಂಗ್ ಸ್ಟ್ರೀಟ್ ಸಾಕಷ್ಟು ಅಂಗಡಿಗಳು ಮತ್ತು ರೆಸ್ಟೋರೆಂಟ್‌ಗಳಿಂದ ಕೂಡಿದ. ಇಲ್ಲಿ ಪ್ರವಾಸಿಗರು ಮತ್ತು ಸ್ಥಳೀಯರು ಸಾಮಾನ್ಯವಾಗಿ ಕಿಕ್ಕಿರಿದು ಸೇರಿರುತ್ತಾರೆ. ಹೀಗಾಗಿ ಗಾಯಾಳುಗಳ ಸಂಖ್ಯೆ ಇನ್ನೂ ಹೆಚ್ಚಿರುವ ಸಾಧ್ಯತೆಯಿದೆ.
ಸ್ಫೋಟದ ಬಳಿಕ ಎಲ್ಲಾ ಸಿಬ್ಬಂದಿಗಳು ಘಟನಾ ಸ್ಥಳದಲ್ಲಿದ್ದಾರೆ ಎಂದು ಸಮೀಪದ ಕಾಸಿಂಪಾಸ ಪೊಲೀಸ್ ಠಾಣೆ ತಿಳಿಸಿದೆ ಆದರೆ ಹೆಚ್ಚಿನ ವಿವರಗಳನ್ನು ನೀಡಿಲ್ಲ.
ಘಟನಾ ಸ್ಥಳದಲ್ಲಿ ಆಂಬ್ಯುಲೆನ್ಸ್ ಮತ್ತು ಅಗ್ನಿಶಾಮಕ ವಾಹನಗಳು ಧಾವಿಸಿದ್ದು ರಕ್ಷಣಾ ಕಾರ್ಯಾಚರಣೆಯಲ್ಲಿವೆ.